(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.09. ಡಿಜಿಟಲ್ ಪೇಮೆಂಟ್ ಪ್ಲಾಟ್ ಫಾರ್ಮ್ನಲ್ಲಿ ಜನಸಾಮಾನ್ಯರ ಜನಪ್ರಿಯ ತಾಣವಾಗಿರುವ ಫೋನ್ಪೇ ಇದೀಗ ಮತ್ತಷ್ಟು ವ್ಯಾಪಾರಿ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದ್ದು, ಈ ಹಿಂದೆ ವ್ಯಾಪಾರಿಗಳಿಗೆ ಗ್ರಾಹಕರ ಪೇಮೆಂಟ್ ಇತಿಹಾಸವನ್ನು ಸುಲಭವಾಗಿ ತಿಳಿಯುವ ಉದ್ದೇಶದಿಂದ ಪಾವತಿ ಕುರಿತು ಸ್ಮಾರ್ಟ್ ಸ್ಪೀಕರ್ ನೋಟಿಫಿಕೇಶನ್ ಅನ್ನು ಪರಿಚಯಿಸಿತು. ಇಷ್ಟು ದಿನ ಇಂಗ್ಲಿಷ್ನಲ್ಲಿ ಈ ನೋಟಿಫಿಕೇಶನ್ ಧ್ವನಿ ಕೇಳಿ ಬರುತ್ತಿತ್ತು. ಆದರೆ, ಇದೀಗ ಪ್ರಾದೇಶಿಕ ಭಾಷೆಗಳಲ್ಲೂ ಪರಿಚಯಿಸಿದೆ.
ಈ ಸ್ಮಾರ್ಟ್ ಸ್ಪೀಕರ್ ಇನ್ಮುಂದೆ ಹಣದ ವಾಹಿವಾಟಿನ ಮಾಹಿತಿಯನ್ನು ಕನ್ನಡ, ತಮಿಳು, ಮಲಯಾಳಂ, ತೆಲುಗಿನಲ್ಲಿ ನೀಡಲು ಸಿದ್ಧವಾಗಿದೆ. ಶೀಘ್ರದಲ್ಲೇ ಮರಾಠಿ ಸೇರಿದಂತೆ ಇನ್ನಿತರ ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆ ಮಾಡುವ ಸಿದ್ಧತೆಯನ್ನು ಕಂಪನಿ ನಡೆಸಿದೆ.
ವರ್ನಾಕ್ಯುಲರ್(ಭಾಷೆ) ವಾಯ್ಸ್ ನೋಟಿಫಿಕೇಶನ್ ಮೂಲಕ ಇದೀಗ ವ್ಯಾಪಾರಿಗಳು ತಮ್ಮ ಗ್ರಾಹಕರ ಹಣದ ವಹಿವಾಟಿನ ಮಾಹಿತಿಯನ್ನು ತಮ್ಮ ಭಾಷೆಗಳಲ್ಲಿ ಪಡೆಯುವ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದರಿಂದ ಅವರು ಪೇಮೆಂಟ್ ಕುರಿತಾದ ವಿವರಗಳ ಧೃಢೀಕರಣಕ್ಕೆ ಗ್ರಾಹಕರ ಸ್ಕ್ರೀನ್ ನಲ್ಲಿ ನೋಡುವ ಅವಶ್ಯಕತೆ ಎದುರಾಗುವುದಿಲ್ಲ. ಜೊತೆಗೆ ತಮ್ಮ ಭಾಷೆಗಳಲ್ಲೇ ಕೇಳುವುದರಿಂದ ಅವರಿಗೆ ಮತ್ತಷ್ಟು ಖಾತ್ರಿ ದೊರಕಲಿದೆ ಎಂದು ಸಂಸ್ಥೆ ತಿಳಿಸಿದೆ.