(ನ್ಯೂಸ್ ಕಡಬ) newskadaba.com ಮಂಗಳೂರು, ಆ. 08. ಸ್ನೇಹದ ಹೆಸರಿನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವುದು ಮಾತ್ರವಲ್ಲದೇ ಆಕೆಯಿಂದ ಸುಮಾರು 30.05 ಪವನ್ ಚಿನ್ನಾಭರಣಗಳನ್ನು ಪಡೆದಿದ್ದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು 3 ವರ್ಷ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಕಜೆಕಾರ್ ನಿವಾಸಿ ರೋಶನ್ ಡಿ’ಸೋಜಾ ಆಲಿಯಾಸ್ ರೋಶನ್ ಫೆರ್ನಾಂಡಿಸ್(31) ಶಿಕ್ಷೆಗೊಳಗಾದವನು. ಈತ 2015ರ ನವೆಂಬರ್ 6ರಂದು ನಗರದ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದು ಹಿಂಬಾಲಿಸಿದ್ದ ಆರೋಪಿ ರೋಶನ್ ಹಲವು ಬಾರಿ ಆಕೆಯ ಜತೆ ಮಾತನಾಡಲು ಯತ್ನಿಸಿದ್ದ. ಬಾಲಕಿ ಕ್ರೈಸ್ತ ಧರ್ಮದವನೆಂದು ತಿಳಿದುಕೊಂಡಿದ್ದ ಆರೋಪಿ ತಾನು ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು ತಾನು ಕೂಡಾ ಕ್ರೈಸ್ತ ಧರ್ಮದವನಾಗಿದ್ದು ಇನ್ಫೋಸಿಸ್‌ನಲ್ಲಿ ಉದ್ಯೋಗದಲ್ಲಿರುವುದಾಗಿ ಹೇಳಿದ್ದಲ್ಲದೇ, ಬಾಲಕಿಯ ಮನೆಯವರ ಪರಿಚಯವಿದೆ ಎಂದು ತಿಳಿಸಿದ್ದ. ಈ ರೀತಿ ನಂಬಿಕೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದ.
ಒಂದು ದಿನ ಆರೋಪಿ ರೋಶನ್ ತನಗೆ ತುರ್ತಾಗಿ ಹಣದ ಆವಶ್ಯಕತೆ ಇದೆ ಎಂದು ಬಾಲಕಿಯನ್ನು ನಂಬಿಸಿ, ಅದರಂತೆ 2015ರ ಡಿ. 28ರಂದು ಆಕೆಯ ಮನೆಯ ಬಳಿ ಹೋಗಿ ಆಕೆಯ ಮೂಲಕ ಆಕೆ ಮತ್ತು ಆಕೆಯ ಮನೆಯವರಿಗೆ ಸಂಬಂಧಿಸಿದ ಒಟ್ಟು 86.07 ಗ್ರಾಂ ತೂಕದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ. ಅನಂತರ ಮತ್ತೊಂದು ದಿನ ಆರೋಪಿ ರೋಶನ್ ತಾನು ಈ ಹಿಂದೆ ಪಡೆದುಕೊಂಡಿದ್ದ ಚಿನ್ನಾಭರಣ ಅಡವಿಟ್ಟಿದ್ದು ಅದರ ವಾಯಿದೆ ಮುಗಿಯುತ್ತಿದೆ. ಬಡ್ಡಿ ಕಟ್ಟದಿದ್ದರೆ ಅದನ್ನು ಮಾರಾಟ ಮಾಡುತ್ತಾರೆ. ಅದಕ್ಕೆ ಮತ್ತೆ ಚಿನ್ನಾಭರಣ ಬೇಕಾಗಿದೆ ಎಂದು ಬಾಲಕಿಯನ್ನು ನಂಬಿಸಿದ್ದ. 2016 ಮಾ.12ರಂದು ಬಾಲಕಿಯ ಅಜ್ಜಿಯ ಮನೆಯ ಬಳಿಗೆ ತೆರಳಿ ಬಾಲಕಿಯ ಮೂಲಕ 34.01 ಗ್ರಾಂ ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ. 2016ರ ಮಾ.30ರಂದು ಬೆಳಗ್ಗೆ 11.30ಕ್ಕೆ ಕದ್ರಿಪಾರ್ಕ್‌ಗೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಅಂದು ಬಾಲಕಿ ಮನೆಗೆ ತಲುಪುವಾಗ ತಡವಾಗಿದ್ದು ಆ ಬಗ್ಗೆ ಮನೆಯವರು ಪ್ರಶ್ನಿಸಿದ್ದರು. ಆಗ ಬಾಲಕಿ ನಡೆದಿರುವ ವಿಚಾರಗಳನ್ನು ತಿಳಿಸಿದ್ದಳು.
ಇತ್ತ ಮನೆಯವರು ಆರೋಪಿಯ ಬಗ್ಗೆ ವಿಚಾರಿಸಿದಾಗ ಆತ ಸಾಫ್ಟ್‌ವೇರ್ ಎಂಜಿನಿಯರ್ ಅಲ್ಲ, ಬದಲಾಗಿ ಆತ ಕ್ಯಾಟರಿಂಗ್‌ವೊಂದರಲ್ಲಿ ಸಪ್ಲೈಯರ್ ಆಗಿದ್ದ ಎಂಬುದು ಗೊತ್ತಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.