(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 07. ಗೃಹಜ್ಯೋತಿ ಯೋಜನೆಯಡಿ ನೋಂದಣಿಯಾಗಿದ್ದರೂ ಕೆಲವು ಗ್ರಾಹಕರಿಗೆ ಜುಲೈ ತಿಂಗಳ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ಬದಲಿಗೆ ಬಳಕೆ ಮಾಡಿದ ವಿದ್ಯುತ್ ಬಿಲ್ ನೀಡಲಾಗಿದೆ. ಇಂಧನ ಇಲಾಖೆಯ ಆದೇಶದ ಪ್ರಕಾರ ಜುಲೈ 27ಕ್ಕೆ ಮೊದಲೇ ನೋಂದಣಿ ಮಾಡಿಸಿಕೊಂಡಿದ್ದರೂ ಎಂದಿನಂತೆಯೇ ಬಿಲ್ ಬಂದಿದ್ದು, ಕೆಲವು ಗ್ರಾಹಕರು ಬಿಲ್ ಪಾವತಿಸಬೇಕೆ, ಬೇಡವೇ ಎನ್ನುವ ಗೊಂದಲದಲ್ಲಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ಸಂಪರ್ಕ ಪಡೆದ 2.16 ಕೋಟಿ ಗ್ರಾಹಕರಲ್ಲಿ 2.14 ಕೋಟಿ ಮಂದಿ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಿದ್ದು, ಇದುವರೆಗೆ 1.41 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿವೆ. ಇವರೆಲ್ಲರಿಗೂ ಆಗಸ್ಟ್ ನಿಂದ ಶೂನ್ಯ ಬಿಲ್ ಬರಲಿದೆ ಎಂದು ಹೇಳಲಾಗಿತ್ತು. ಆದರೆ ಜುಲೈ 27ಕ್ಕೆ ಮೊದಲೇ ನೋಂದಾಯಿಸಿದ್ದರೂ ಶೂನ್ಯ ಬಿಲ್ ಪಡೆಯುವ ಭಾಗ್ಯ ಸಿಕ್ಕಿಲ್ಲ.