(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.03. ಕೇಂದ್ರ ಸರ್ಕಾರ ಬಜೆಟ್ ನಲ್ಲಿ ‘ಮೋದಿ ಕೇರ್’ ಉಚಿತ ಆರೋಗ್ಯ ರಕ್ಷಣೆ ಯೋಜನೆಯನ್ನು ಘೋಷಿಸಿದ ಬೆನ್ನಲ್ಲೇ ದೇಶದಲ್ಲಿಯೇ ಮೊದಲ ಬಾರಿಗೆ ವಿಶಿಷ್ಟವಾದ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಎಲ್ಲರಿಗೂ ಆರೋಗ್ಯ ಭಾಗ್ಯವನ್ನು ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರ, ಸಾರ್ವತ್ರಿಕ ಆರೋಗ್ಯ ಯೋಜನೆ (ಯುನಿವರ್ಸಲ್ ಹೆಲ್ತ್ ಕೇರ್) ಜಾರಿಗೆ ತರುತ್ತಿದ್ದು, ಇದರಿಂದಾಗಿ ಸುಮಾರು 10 ಕೋಟಿ ಕುಟುಂಬಗಳಿಗೆ ಆರೋಗ್ಯ ಸೌಲಭ್ಯ ಸಿಗಲಿದೆ. ಬಿ.ಪಿ.ಎಲ್., ಎ.ಪಿ.ಎಲ್. ಕುಟುಂಬದವರು ಸೇರಿದಂತೆ ಎಲ್ಲಾ ವರ್ಗದವರ ಆರೋಗ್ಯ ರಕ್ಷಣೆಗೆ ಈ ಯೋಜನೆ ರೂಪಿಸಿದ್ದು, ಫೆಬ್ರವರಿ 24 ರಂದು ಸಿ.ಎಂ. ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ತಿಳಿಸಿದ್ದಾರೆ. ಆಧಾರ್ ಕಾರ್ಡ್ ಹೊಂದಿದವರು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಸರು ನೋಂದಾಯಿಸಿ ಆರೋಗ್ಯ ಇಲಾಖೆಯಿಂದ ಯುನಿವರ್ಸಲ್ ಹೆಲ್ತ್ ಕಾರ್ಡ್ ಪಡೆಯಬಹುದು. ಈ ಕಾರ್ಡ್ ಬಳಸಿಕೊಂಡು ಚಿಕಿತ್ಸೆ ಪಡೆಯಬಹುದಾಗಿದೆ. ಯುನಿವರ್ಸಲ್ ಹೆಲ್ತ್ ಕೇರ್ ಯೋಜನೆ ಜಾರಿಯಾದ ಬಳಿಕ ಯಶಸ್ವಿನಿ ಸೇರಿದಂತೆ ಎಲ್ಲಾ ಯೋಜನೆಗಳು ಇದರ ವ್ಯಾಪ್ತಿಗೆ ಬರುತ್ತವೆ. ಯೋಜನೆಗಾಗಿ ವಾರ್ಷಿಕ 1200 ಕೋಟಿ ರೂ. ಬೇಕಾಗಬಹುದು ಎಂದು ಸಚಿವರು ತಿಳಿಸಿದ್ದಾರೆ.