(ನ್ಯೂಸ್ ಕಡಬ) newskadaba.com ಕೇದಾರನಾಥ, ಆ. 05. ಭಾರೀ ಮಳೆಯಿಂದಾಗಿ ಉತ್ತರಾಖಂಡ್‌ನ ಕೇದಾರನಾಥ ದೇವಸ್ಥಾನದ ಯಾತ್ರೆಯ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ 4 ಜನರು ಮೃತಪಟ್ಟು 16 ಜನ ನಾಪತ್ತೆಯಾದ ಕುರಿತು ವರದಿಯಾಗಿದೆ.
ಇನ್ನು ಭೂಕುಸಿತದಿಂದಾಗಿ ಗೌರಿಕುಂಡ್ ಪ್ರದೇಶದಲ್ಲಿನ ಹಲವು ಅಂಗಡಿಗಳು ಕೊಚ್ಚಿ ಹೋಗಿವೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪಡೆಗಳು ರಕ್ಷಣಾ ಕಾರ್ಯ ನಡೆಸುತ್ತಿದೆಯಾದರೂ ಭಾರೀ ಮಳೆ ಹಾಗೂ ಗುಡ್ಡಗಳಿಂದ ಬೀಳುವ ಬಂಡೆಗಳು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿವೆ ಎನ್ನಲಾಗಿದೆ. ನೇಪಾಳದ ಕೆಲವರು ಸೇರಿದಂತೆ ನಾಪತ್ತೆಯಾಗಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಭಾರೀ ಮಳೆಗೆ ರಾಜ್ಯದ ಹಲವೆಡೆ ಆರೆಂಜ್ ಅಲರ್ಚ್ ಘೊಷಿಸಲಾಗಿದೆ.
ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಪಾದಯಾತ್ರೆಯನ್ನು ನಿಲ್ಲಿಸಲಾಗಿದೆ. ಕೇದಾರನಾಥ ದೇಗುಲಕ್ಕೆ ಟ್ರೆಕ್ಕಿಂಗ್ ಮತ್ತು ಅಲ್ಲಿಂದ ಬರುವವರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಮೂರು ಅಂಗಡಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಕೆಲವರು ಹಠಾತ್ ಪ್ರವಾಹದಲ್ಲಿ ಕೊಚ್ಚಿಹೋಗಿದ್ದರೆ, ಇನ್ನು ಕೆಲವರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದಾರೆ ಎಂದು ನಂಬಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರುದ್ರಪ್ರಯಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೌರಭ್ ಗಹರ್ವಾರ್ ಎಂಬವರು ನಾಪತ್ತೆಯಾದವರಿಗಾಗಿ ಶೋಧ ನಡೆಸುತ್ತಿರುವಾಗ ನಾಲ್ಕು ಮೃತದೇಹಗಳು ಪತ್ತೆಯಾಗಿದೆ ಎಂದು ಮಾಹಿತಿ ನೀಡಿರುವುದಾಗಿ ವರದಿಯೊಂದು ತಿಳಿಸಿದೆ.