(ನ್ಯೂಸ್ ಕಡಬ)newskadaba.com ಆ.04. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ. ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದಾಗಿದ್ದು, ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು. ಈ ಹಣ್ಣು ಸಾಮಾನ್ಯವಾಗಿ ಒಣ ಉಷ್ಣಾಂಶವಿರುವ ಹಾಗೂ ತಂಪು ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದಕ್ಕೆ ಆರೈಕೆಯ ಅಗತ್ಯ ಇಲ್ಲ. ಸಾಮಾನ್ಯವಾಗಿ ಕೆಂಪು ಹಾಗೂ ಬಿಳಿ ಬಣ್ಣಗಳಲ್ಲಿ ಈ ಹಣ್ಣು ಸಿಗುತ್ತದೆ. ರುಚಿಯಲ್ಲಿ ಕೊಂಚ ಭಿನ್ನವಾಗಿರುತ್ತದೆ.
ಪೌಷ್ಠಿಕಾಂಶದ ವಿಷಯದಲ್ಲಿ ಸೀಬೆಹಣ್ಣಿನಲ್ಲಿ ಉತ್ತಮ ವಿಟಮಿನ್ ಸಿ ಅಂಶವಿರುತ್ತದೆ. ಒಂದು ಮಧ್ಯಮ ಗಾತ್ರದ ಸೀಬೆಹಣ್ಣಿನಲ್ಲಿ 200 ಮಿಲಿ ಗ್ರಾಂ ನಷ್ಟು ವಿಟಮಿನ್ ಸಿ ದೊರಕುತ್ತದೆ. ವಿಟಮಿನ್ ಸಿ ದೇಹ ಬೆಳವಣಿಗೆಗೆ, ಮುಖ್ಯವಾಗಿ ರೋಗ ನಿರೋಧಕ ಹಾಗೂ ದೇಹದ ಜೀವ ರಸಾಯನ ಕ್ರಿಯೆಗಳಿಗೆ ಅತ್ಯಗತ್ಯ ಅಂಶ. ಹಲವು ಹಾರ್ಮೋನುಗಳ ಉತ್ಪಾದನೆಯು ವಿಟಮಿನ್ ಸಿ ಯ ಲಭ್ಯತೆಯನ್ನು ಅವಲಂಬಿಸಿದೆ. ಜೀವಕೋಶಗಳನ್ನು ಛಿದ್ರಗೊಳಿಸಿ ಕ್ಯಾನ್ಸರ್ ತರಿಸುವ ಫ್ರೀ ರಾಡಿಕಲ್ಸ್ ಎಂಬ ಅಡ್ಡ ಪರಿಣಾಮಕಾರಿ ಕಣಗಳ ಉತ್ಪಾದನೆಯನ್ನು ತಡೆಯಬಲ್ಲ ವಿಟಮಿನ್ ಸಿ ಅತ್ಯಂತ ಪ್ರಬಲ ಆಯಂಟಿ ಆಕ್ಸಿಡೆಂಟ್.
ಸೀಬೆಹಣ್ಣಿನಿಂದ ಶೀತ, ನೆಗಡಿ ಉಂಟಾಗುವುದಿಲ್ಲ. ಬದಲಿಗೆ ಶೀತ-ನೆಗಡಿಯನ್ನು ಉಂಟು ಮಾಡುವ ಬ್ಯಾಕ್ಟೀರಿಯಗಳನ್ನು ನಾಶಗೊಳಿಸುತ್ತವೆ. ಈ ಗುಣದಿಂದ ಇದನ್ನು ಅತಿಸಾರ ಹಾಗೂ ವಾಂತಿ-ಭೇದಿ ಇರುವ ಮಂದಿ ಸೇವಿಸುವುದು ಉಪಯುಕ್ತ. ಇದರಲ್ಲಿರುವ ವಿಟಮಿನ್ ಬಿ6 ನಿಂದ ಮೆದುಳು ಚುರುಕಾಗುತ್ತದೆ. ಓದುವ ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ಅಧಿಕ ನಾರಿನಂಶವು ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗದಂತೆ ತಡೆಗಟ್ಟುತ್ತವೆ. ಹಲ್ಲಿನ ತೊಂದರೆ ಇರುವವರು ಸೀಬೆಹಣ್ಣಿನ ಜ್ಯೂಸ್ ಸೇವಿಸಬಹುದು ಎಂದು ತಜ್ಙರು ತಿಳಿಸಿದ್ದಾರೆ.