(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 04. ಇಲ್ಲಿನ ಲಾಲ್ಬಾಗ್ನಲ್ಲಿ 214ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರದಂದು ಚಾಲನೆ ನೀಡಿದರು.
2.50 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಫ್ಲವರ್ ಶೋ ವನ್ನು
ಆಯೋಜನೆ ಮಾಡಲಾಗಿದ್ದು, ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಪುಷ್ಪಾರ್ಚನೆಗೈಯುವ ಮೂಲಕ ಚಾಲನೆ ನೀಡಲಾಯಿತು. ಜತೆಗೆ ಕೆಂಗಲ್ ಹನುಮಂತಯ್ಯ ಜೀವನಾಧಾರಿತ ಪುಸ್ತಕ ಬಿಡುಗಡೆ ಮಾಡಿದರು.
ಈ ಫಲಪುಷ್ಪ ಪ್ರದರ್ಶನಕ್ಕೆ ಎಲ್ಲಾ ನಾಲ್ಕು ದ್ವಾರಗಳಲ್ಲಿ ಸಾರ್ವಜನಿಕರಿಗೆ ಪ್ರವೇಶವಿರಲಿದ್ದು, ವಾರದ ದಿನಗಳಲ್ಲಿ 70 ರೂ. ಮತ್ತು ರವಿವಾರ ಮತ್ತು ಸರಕಾರಿ ರಜಾ ದಿನಗಳಲ್ಲಿ 80 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. 12 ವರ್ಷದ ಕೆಳಗಿನ ಮಕ್ಕಳಿಗೆ 30 ರೂ. ಪ್ರವೇಶ ಶುಲ್ಕವಿರಲಿದೆ. ಶಾಲಾ ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸಿ ಬರುವ 1ರಿಂದ 10ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರದರ್ಶನದ ಪೂರ್ಣ ಅವಧಿಯಲ್ಲಿ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.