ಕಡಬ: ವಿವಿದ ಇಲಾಖೆಗಳ ಕಾರ್ಯಾರಂಭ‌ ವಿಳಂಬ

(ನ್ಯೂಸ್ ಕಡಬ) newskadaba.com ಕಡಬ, ಆ. 04. ಕಡಬ ತಾಲೂಕು ಘೋಷಣೆಯಾಗಿ ತಾಲೂಕು ಆಡಳಿತ ಸೌಧ, ತಾಲೂಕು ಪಂಚಾಯತ್ ಕಟ್ಟಡ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡವೂ ನಿರ್ಮಾಣವಾಯಿತು. ಆದರೆ, ಹುದ್ದೆ ಸೃಷ್ಟಿಯಾಗದೇ ಇಲಾಖೆಗಳ ಕಾರ್ಯಾರಂಭಗೊಳ್ಳದ ಹಿನ್ನೆಲೆ ತಾಲೂಕಿನ ಜನ ಅಗತ್ಯ ಕೆಲಸಗಳಿಗೆ ಪುತ್ತೂರು ತಾಲೂಕಿಗೆ ಪ್ರಯಾಣಿಸಬೇಕಾದ ಪರಿಸ್ಥಿತಿ ಮುಂದುವರಿದಿದೆ.

ಕಡಬ ತಾಲೂಕಿಗೆ ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ, ಸರ್ವೆ ಇಲಾಖೆ, ಉಪ ಖಜಾನೆ, ಮೆಸ್ಕಾಂ ಇಲಾಖೆಯ ಹುದ್ದೆಗಳು ಬಿಟ್ಟರೆ ಬೇರೆ ಯಾವುದೇ ತಾಲೂಕು ಮಟ್ಟದ ಅಧಿಕಾರಿಗಳ ಹುದ್ದೆ ಸೃಷ್ಟಿಯಾಗಿಲ್ಲ. ಕಡಬದಲ್ಲಿ 10 ಕೋಟಿ ವೆಚ್ಚದಲ್ಲಿ ತಾಲೂಕು ಆಡಳಿತ ಸೌಧ ನಿರ್ಮಾಣವಾಗಿದ್ದು, ಇದರಲ್ಲಿ ತಹಶೀಲ್ದಾರ್ ಕಚೇರಿ, ಶಾಸಕರ ಕಚೇರಿ, ಸರ್ವೆ ಇಲಾಖೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ ಇಲಾಖೆಗಳು ಅತ್ತ ತಾಲ್ಲೂಕು ಮಟ್ಟದ ಇಲಾಖೆಗಳೂ ಆಗದೇ, ಕಡಬ ಹೋಬಳಿ ಮಟ್ಟದ ಇಲಾಖೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಜನರ ಕೆಲವು ಕೆಲಸಗಳು ಕಡಬದಲ್ಲಿ ಆದರೆ, ಉಳಿದ ಕೆಲಸಗಳಿಗೆ ಪುತ್ತೂರು ತಾಲ್ಲೂಕು ಕಚೇರಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.


ತಾಲ್ಲೂಕು ಆಡಳಿತ ಸೌಧದಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಮತ್ತು ಉಪ ಖಜಾನೆಗೆ ಕೊಠಡಿ ಮೀಸಲಿಟ್ಟಿದ್ದು, ಇದುವರೆಗೆ ಉಪ ನೋಂದಣಾಧಿಕಾರಿ ಕಚೇರಿ ಪ್ರಾರಂಭವಾಗಿಲ್ಲ. ಇದರಿಂದಾಗಿ ಪುತ್ತೂರಿನಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಉಪ ಖಜಾನೆ ಕಚೇರಿಯೂ ಆರಂಭವಾಗಿಲ್ಲ.

Also Read  ಸುಬ್ಯಹ್ಮಣ್ಯ: 13ರ ಬಾಲಕಿ ನೇಣುಬಿಗಿದು ಆತ್ಮಹತ್ಯೆ..!

ಆಹಾರ ಇಲಾಖೆ (ಪಡಿತರ) ಮತ್ತು ಜನನ ಮರಣ ನೋಂದಣಿ ಇಲಾಖೆಗಳ ಮುಖ್ಯಸ್ಥರು ವಾರದಲ್ಲಿ 2 ದಿನ ಇಲ್ಲಿ ಸಿಗುತ್ತಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆಧಾರ್ ಮತ್ತು ಪಡಿತರ ಚೀಟಿಗೆ ಸಂಬಂಧಿಸಿದಂತೆ ಜನರು ಯಾವ ಕೆಲಸ ಎಲ್ಲಿ ಮಾಡಿಸಬೇಕು ಎಂಬ ಗೊಂದಲದಲ್ಲಿದ್ದು, ಸೈಬರ್ ಕೇಂದ್ರಗಳಿಗೆ ಅಲೆದಾಡುವಂತಾಗಿದೆ.

ಲೋಕೋಪಯೋಗಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಕಾರ್ಮಿಕ ಇಲಾಖೆ, ಅಗ್ನಿಶಾಮಕ ದಳ, ಕೃಷಿ, ತೋಟಗಾರಿಕಾ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿ, ಪೋಲಿಸ್ ವೃತ್ತ ನಿರೀಕ್ಷಕರ ಕಚೇರಿ, ಸಾರಿಗೆ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಕೆಎಸ್‌ಆರ್‌ಟಿಸಿ, ಸಹಕಾರ ಸಂಘಗಳ ನಿಬಂಧಕರ ಇಲಾಖೆ, ಕಚೇರಿಗಳು ಕಡಬದಲ್ಲಿ ಕಾರ್ಯಾರಂಭ ಮಾಡಿಲ್ಲ. ನ್ಯಾಯಾಲಯಕ್ಕಾಗಿ ಕಡಬ ತಾಲೂಕು ಆಡಳಿತ ಸೌಧದ ಹಿಂಭಾಗ ಸುಮಾರು 3 ಎಕರೆ ಮೀಸಲಿಟ್ಟಿದ್ದು, ನ್ಯಾಯಾಲಯ, ಕಚೇರಿ ಶೀಘ್ರವೇ ಆರಂಭವಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Also Read  ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ ➤ ಉಚಿತ ಆಯುಷ್ ಚಿಕಿತ್ಸಾ ಶಿಬಿರ

ಕಡಬ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದ ಬಳಿಕ ಸುಮಾರು ₹ 4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಎಕ್ಸ್‌ರೇ, ಆಕ್ಸಿಜನ್ ಘಟಕ, ಪ್ರಯೋಗಾಲಯವೂ ಇದೆ. ಆದರೆ, ಈ ವಿಭಾಗಕ್ಕೆ ಸಂಬಂಧಿಸಿದ ಸಿಬ್ಬಂದಿ ಕೊರತೆ ಇದ್ದು, ಜನರಿಗೆ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ತಾಲೂಕು ಆಸ್ಪತ್ರೆಯಾಗಿ ಉನ್ನತೀಕರಿಸಿ ಸಿಬ್ಬಂದಿ, ವೈದ್ಯರ ಕೊರತೆ ನೀಗಿಸಿದರೆ ಮಾತ್ರ ಕಡಬ ಸರ್ಕಾರಿ ಆಸ್ಪತ್ರೆಯ ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆ ಜನರದ್ದು. ಜನಪ್ರತಿನಿಧಿ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಜನರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಸ್ಪಂದಿಸಬೇಕು ಎಂದು ತಾಲ್ಲೂಕಿನ ಜನ ಆಗ್ರಹಿಸಿದ್ದಾರೆ.

error: Content is protected !!
Scroll to Top