(ನ್ಯೂಸ್ ಕಡಬ) newskadaba.com ಮಂಗಳೂರು, ಆ. 04. ಪುತ್ತೂರು ವಿಭಾಗ ವ್ಯಾಪ್ತಿಯ ಸುಳ್ಯ, ಪುತ್ತೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತರಿಗೆ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಉಚಿತ ಬಸ್‍ಪಾಸ್ ಸೌಲಭ್ಯವನ್ನು ನೀಡಲಾಗುತ್ತಿದೆ.
ನಿಗದಿಪಡಿಸಿರುವ ಸ್ಥಳಗಳು:
ಆ.9ರಂದು ಬೆಳಿಗ್ಗೆ 10ರಿಂದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಂಡೋ ಸಂತ್ರಸ್ತರ ಪಾಲನಾ ಕೇಂದ್ರ, ಆ.10ರಂದು ಬೆಳಿಗ್ಗೆ 10ರಿಂದ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಆ.11ರಂದು ಬೆಳಿಗ್ಗೆ 10 ಗಂಟೆಯಿಂದ ಪುತ್ತೂರು ತಾಲೂಕಿನ ಕೊಯಿಲ ಪಂಚಾಯತ್ ಕಚೇರಿ, ಆ.12ರಂದು ಬೆಳಿಗ್ಗೆ 10 ರಿಂದ ಬಂಟ್ವಾಳ ತಾಲೂಕಿನ ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆ.16ರಂದು ಬೆಳಿಗ್ಗೆ 10ರಿಂದ ಸುಳ್ಯ ತಾಲೂಕಿನ ಬೆಳ್ಳಾರೆ ಕ.ರಾ.ರ.ಸಾ.ನಿಗಮ, ಸಂಚಾರ ನಿಯಂತ್ರಣ ಕೇಂದ್ರದಲ್ಲಿ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಉಚಿತ ಬಸ್‍ಪಾಸ್ ವಿತರಿಸಲಾಗುವುದು.
ಸಂತ್ರಸ್ತರು ಅಥವಾ ಅವರ ಕುಟುಂಬದವರು ವಿಕಲಚೇತನರ ಕಲ್ಯಾಣ ಇಲಾಖೆಯಿಂದ ನೀಡಿರುವ ಎಂಡೋಸಲ್ಫಾನ್ ಗುರುತಿನ ಕಾರ್ಡ್ ಹಾಗೂ ಯಥಾಪ್ರತಿ ವಾಸ್ತವ್ಯ ದೃಢೀಕರಣದ ಬಗ್ಗೆ ದಾಖಲಾತಿ, ಪಾಸ್‍ಪೋರ್ಟ್ ಅಳತೆಯ ಎರಡು ಫೋಟೋ, ಅಂಚೆ ಚೀಟಿ ಗಾತ್ರದ ಒಂದು ಫೋಟೋ ಹಾಗೂ ವೈದ್ಯಕೀಯ ಪರೀಕ್ಷೆಗಳ ವರದಿ, ಕಂದಾಯ ಇಲಾಖೆಯಿಂದ ಒದಗಿಸಿದ ಮಂಜೂರಾತಿ ಆದೇಶದ ಪ್ರತಿಯೊಂದಿಗೆ ನೇರವಾಗಿ ಅರ್ಜಿ ಸಲ್ಲಿಸಿ ಉಚಿತ ಪಾಸನ್ನು ಪಡೆಯಬಹುದು ಎಂದು ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.