(ನ್ಯೂಸ್ ಕಡಬ) newskadaba.com ಕಲಬುರಗಿ, ಆ. 04. ಶುಕ್ರವಾರದಂದು ಮಧ್ಯಾಹ್ನ ಎರಡು ಗಂಟೆಯೊಳಗೆ ವಿದ್ಯುತ್ ಗುತ್ತಿಗೆದಾರರ ಸಂಘದ ಮನವಿಗಳನ್ನು ಸರಕಾರ ಪೂರೈಸದಿದ್ದಲ್ಲಿ ಆ. 05 ರಂದು ನಡೆಯುವ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ 5,000 ಜನರು ಪ್ರತಿಭಟನೆ ನಡೆಸಲಿದ್ದೇವೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಜೆಸ್ಕಾಂ ವ್ಯವಸ್ಥಾಪಕರ ಗಮನಕ್ಕೆ ತರಲಾಗಿದೆ. ಆದರೆ, ನಮ್ಮ ಅಹವಾಲುಗಳನ್ನು ಕೇಳದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕೂಡಲೇ ಜೆಸ್ಕಾಂ ಎಂಡಿಯನ್ನು ವರ್ಗಾವಣೆ ಮಾಡಬೇಕು. ಅಲ್ಲದೇ ಮೂರು ತಿಂಗಳಿಂದ ಜೆಸ್ಕಾಂ ವ್ಯಾಪ್ತಿಯಲ್ಲಿ ಸಿಂಗಲ್ ಹಾಗೂ ತ್ರಿಫೇಸ್ ವಿದ್ಯುತ್ ಮಾಪಕಗಳ ಕೊರತೆ ಕಾಡುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಕಲಬುರಗಿಯ ಎನ್‌ವಿ ಮೈದಾನದಲ್ಲಿ ನಡೆಯಲಿರುವ ಗೃಹಜ್ಯೋತಿ ಉದ್ಘಾಟನೆ ಸಮಾರಂಭದಲ್ಲಿ ಸುಮಾರು 5000 ಜನರು ಪ್ರತಿಭಟನೆ ನಡೆಸಲಿದ್ದೇವೆ. ಇದು ಸರಕಾರದ ವಿರುದ್ಧವಲ್ಲ, ಸರಕಾರದ ಗಮನ ಸೆಳೆಯುವ ಪ್ರಯತ್ನವಾಗಿದೆ ಎಂದು ಹೇಳಿದರು.