ಪ್ರವಾಸಿಗರಿಗೆ ಮುಕ್ತಗೊಂಡ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಜಲಪಾತಗಳು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಆ. 03: ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಎಡಬಿಡದೇ ಸುರಿಯುತ್ತಿದ್ದ ಮಳೆಯಿಂದಾಗಿ ಚಿಕ್ಕಮಗಳೂರಿನ ವಿವಿಧ ಜಲಪಾತ ಹಾಗೂ ಗಿರಿ ಪ್ರದೇಶಗಳಿಗೆ ಪ್ರವಾಸಿಗರ ನಿರ್ಬಂಧವನ್ನು ವಿಧಿಸಿದ ಚಿಕ್ಕಮಗಳೂರು ಜಿಲ್ಲಾಡಳಿತವು ಇಂದಿನಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿದೆ.

ರಾಜ್ಯದಲ್ಲಿ ಕಳೆದ ೧೫ ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದಾಗಿ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆಯಿಂದಾಗಿ ಹಳ್ಳ-ಕೊಳ್ಳ, ನದಿಗಳು ಹಾಗೂ ಜಲಪಾತಗಳು ತುಂಬಿ ಹರಿಯುತ್ತಿದ್ದವು. ಈ ವೇಳೆ ಹಲವು ಅವಘಡಗಳು ಕೂಡ ನಡೆದಿದ್ದವು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ವಿವಿಧ ಪ್ರವಾಸಿ ಕ್ಷೇತ್ರಗಳಿಗೆ ಪ್ರವಾಸಿಗರು ಆಗಮಿಸದಂತೆ ಜಿಲ್ಲಾಡಳಿತವು ನಿಷೇಧವನ್ನು ಹೇರಿತ್ತು. ಆದರೆ, ಈಗ ಕಳೆದ ಎರಡು ದಿನಗಳಿಂದ ಮಲೆನಾಡಿನಲ್ಲಿ ಮಳೆ ತಗ್ಗಿರುವ ಹಿನ್ನೆಲೆಯಲ್ಲಿ ಮತ್ತೆ ಪ್ರವಾಸಿಗರ ವೀಕ್ಷಣೆಗೆ ಮುಕ್ತ ಅವಕಾಶವನ್ನು ಮಾಡಿಕೊಟ್ಟಿದೆ.
ಮಧ್ಯಾಹ್ನ ೧೨ ಗಂಟೆಯಿಂದ ಪ್ರವಾಸಿಗರ ಸಂಚಾರಕ್ಕೆ ಮುಕ್ತ ಅವಕಾಶ: ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಪ್ರದೇಶದ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತವು ವಾರಾಂತ್ಯದ ದಿನಗಳಾದ ಶುಕ್ರವಾರದಿಂದ ಸೋಮವಾರದವರೆಗೆ ಮೂರು ದಿನ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು. ಈಗ ಮುಳ್ಳಯ್ಯನಗಿರಿ ಸಾಲಿನಲ್ಲಿ ಗುಡ್ಡ ಕುಸಿತದ ಹಿನ್ನೆಲೆಯಲ್ಲಿಯೂ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಗುಡ್ಡ ಕುಸಿತದ ಭಾಗವನ್ನು ತೆರವು ಮಾಡಲಾಗಿದ್ದು, ಮಳೆಯೂ ತಗ್ಗಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ೧೨ ಗಂಟೆಯಿಂದ ಪ್ರವಾಸಿಗರ ವೀಕ್ಷಣೆಗೆ ಅನುಮತಿ ನೀಡಲಾಗಿದೆ.

ಚಿಕ್ಕಮಗಳೂರಿನ ಕೈಮರ ಚೆಕ್ ಪೋಸ್ಟ್ ನಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಈಗ ಮಳೆ ಕಡಿಮೆಯಾಗಿದ್ದು, ಅಪಾಯದ ಪ್ರಮಾಣವೂ ತಗ್ಗಿರುವ ಕಾರಣದಿಂದ ಇಂದು ಮಧ್ಯಾಹ್ನದಿಂದ ಪ್ರವಾಸಿಗರು ಗಿರಿ ಪ್ರದೇಶಗಳಿಗೆ ಹೋಗಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಆದರೆ, ಜಲಪಾತ ಸೇರಿದಂತೆ ಗಿರಿ ಪ್ರದೇಶಗಳಲ್ಲಿ ಪ್ರವಾಸಿಗರು ರೀಲ್ಸ್ ಮಾಡುವುದು ಹಾಗೂ ಸಾಹಸ ಪ್ರದರ್ಶನ ಮಾಡಲು ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳಬಾರದು ಎಂದು ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ.

error: Content is protected !!

Join the Group

Join WhatsApp Group