(ನ್ಯೂಸ್ ಕಡಬ) newskadaba.com ಚಾರ್ಮಾಡಿ, ಆ. 03: ಚಾರ್ಮಾಡಿ ಘಾಟಿ ರಸ್ತೆ ಮಧ್ಯ ವಾಹನಗಳನ್ನು ನಿಲ್ಲಿಸಿ ಮೋಜು-ಮಸ್ತಿ ಮಾಡುವ ಪ್ರವಾಸಿಗರಿಗೆ ಬ್ರೇಕ್ ಹಾಕಲು ಘಾಟಿ ಪ್ರದೇಶದ ಅಗತ್ಯ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಘಾಟಿಯ ಸೌಂದರ್ಯ ವೀಕ್ಷಣೆ ನೆಪದಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿ ನೀಡುವುದು, ಜಾರುವ ಬಂಡೆಗಳ ಮೇಲೆ ಹತ್ತುವುದು, ಅಪಾಯಕಾರಿ ತೊರೆ, ಹಳ್ಳಗಳಿಗೆ ಇಳಿಯುವುದು, ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿಗೆ ಮುಗಿ ಬೀಳುವುದು, ರಸ್ತೆಮಧ್ಯೆ ಕುಣಿದು, ಕುಪ್ಪಳಿಸುವುದು, ಮದ್ಯಪಾನ ಮೊದಲಾದ ಅನಗತ್ಯ ಚಟುವಟಿಕೆಗಳಿಂದ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಉಂಟುಮಾಡುತ್ತಿದ್ದರು. ಕಳೆದ ಸುಮಾರು ಒಂದು ತಿಂಗಳಿನಿಂದ ಇದು ನಿರಂತರವಾಗಿ ನಡೆಯುತ್ತಿದ್ದು,ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು
ದಕ ಹಾಗೂ ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಈಗ ಪ್ರವಾಸಿಗರ ಅನಗತ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರನ್ನು ನಿಯೋಜಿಸಲಾಗಿದೆ. ಇವರು ಇಲ್ಲಿನ ಅಗತ್ಯ ಪ್ರದೇಶಗಳಲ್ಲಿ ದಿನವಿಡೀ ಕಾರ್ಯ ನಿರ್ವಹಿಸಲಿದ್ದಾರೆ. ಪ್ರವಾಸಿಗರ ಮೋಜಿನಿಂದ ವಾಹನ ಸಂಚಾರಕ್ಕೆ ಉಂಟಾಗುತ್ತಿದ್ದ ಅಡ್ಡಿಗೆ ಇದರಿಂದ ಬ್ರೇಕ್ ಬೀಳಲಿದೆ.