(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಫೆ.01. ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಎಲ್ಲಿಂದಲೋ ಕಳ್ಳತನ ಮಾಡಿ ಹಿಂಸಾತ್ಮಕ ರೀತಿಯಲ್ಲಿ ಕೈಕಾಲು ಕಟ್ಟಿ ಮಾರುತಿ ಓಮ್ನಿ ಕಾರಿನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಬೆಳ್ಳಾರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.
ಮಾರುತಿ ಓಮ್ನಿ (KA. 21.N.1129) ಕಾರಿನಲ್ಲಿ ಅಮಾನುಷವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಬೆಳ್ಳಾರೆ ಪೊಲೀಸರು ಠಾಣಾ ವ್ಯಾಪ್ತಿಯ ಕಲ್ಮಡ್ಕ ಗ್ರಾಮದ ಅಡಿಬಾಯಿ ಎಂಬಲ್ಲಿ ಕಾರ್ಯಾಚರಣೆ ನಡೆಸಿ ಮಾರುತಿ ಓಮ್ನಿ ಕಾರು, ವಿವಿಧ ತಳಿಯ ನಾಲ್ಕು ಹೋರಿ ಕರುಗಳು ಹಾಗೂ ಬೆಂಗಾವಲಾಗಿದ್ದ ದ್ವಿಚಕ್ರ ವಾಹನ (KA.21.Q.4544) ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಕಲ್ಮಡ್ಕ ಗ್ರಾಮದವರಾದ ಅಬ್ದುಲ್ ಖಾದರ್ ಎಂಬವರ ಪುತ್ರ ಹಸೈನಾರ್ ಯಾನೆ ತಾಜುದ್ದೀನ್ (30), ಇಬ್ರಾಹಿಂ ಎಂಬವರ ಪುತ್ರ ಹೈದರಾಲಿ (38), ಅಬೂಬಕರ್ ಎಂಬವರ ಪುತ್ರ ಇಬ್ರಾಹಿಂ (23), ಹಾಗೂ ಮೂಸಾ ಎಂಬವರ ಪುತ್ರ ಮಹಮ್ಮದ್ ಆಲಿ (26) ಎಂದು ಗುರುತಿಸಲಾಗಿದೆ. ವಶಕ್ಕೆ ಪಡೆದ ಜಾನುವಾರುಗಳ ಒಟ್ಟು ಮೌಲ್ಯ 4000 ಹಾಗೂ ವಾಹನಗಳ ಅಂದಾಜು ಮೌಲ್ಯ 2.50 ಲಕ್ಷ ಎಂದು ಅಂದಾಜಿಸಲಾಗಿದ್ದು, ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.