(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 31. ತರಕಾರಿ, ದವಸ ಧಾನ್ಯಗಳು ಸೇರಿದಂತೆ ಈಗಾಗಲೇ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ನಾಳೆಯಿಂದ ಮತ್ತಷ್ಟು ದುಬಾರಿ ಎನಿಸಲಿದೆ. ಹೊರಗಡೆ ಪ್ರಯಾಣ ಬೆಳೆಸುವಾಗ ಹಸಿವಾಯಿತೆಂದು ಹಸಿವು ನೀಗಿಸಲು ಹೋಟೆಲ್ ಗೆ ಕಾಸು ಭರ್ತಿಯಿಲ್ಲದೇ ಕಾಲಿಟ್ಟರೆ ಅರ್ಧ ಹೊಟ್ಟೆ ತುಂಬಿಸಿಕೊಂಡು ಬರಬೇಕಾದೀತು. ಆಗಸ್ಟ್ 1 ರಿಂದ ನಂದಿನಿ ಪ್ಯಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಾದರೆ, ಹೋಟೆಲ್ ತಿಂಡಿ-ತಿನಿಸು ಕೂಡ ದುಬಾರಿ ಆಗಲಿವೆ.
ಇನ್ನು ಬೆಂಗಳೂರಿನಲ್ಲಿ ಆಗಸ್ಟ್ 1 ರಿಂದ ಹೋಟೆಲ್ ಕಾಫಿ, ಟೀ, ತಿಂಡಿ ತಿನಿಸುಗಳ ದರ ಹೆಚ್ಚಳ ಮಾಡಲು ಹೋಟೆಲ್ ಸಂಘ ತೀರ್ಮಾನಿಸಿದೆ. ಹೊಟೇಲ್ ಮಾಲೀಕರುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ನೀಡಿರುವ ಮಾಹಿತಿ ಪ್ರಕಾರ, ತಿಂಡಿ ತಿನಿಸು ಜೊತೆಗೆ ಕಾಫಿ ಟೀ ದರವನ್ನು ಶೇಕಡ 10ರಷ್ಟು ಸಹ ಹೆಚ್ಚಳ ಮಾಡಲಾಗುವುದು. ಅನೇಕ ಹೋಟೆಲ್ ನವರು ಶೇಕಡಾ 20ರಷ್ಟು ಏರಿಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ನಾಳೆಯಿಂದ ಒಂದು ಲೀಟರ್ ಹಾಲು 42 ರೂಪಾಯಿ ಆಗಲಿದೆ. ಹೀಗಾಗಿ ಕಾಫಿ ಹಾಗೂ ಟೀ ಬೆಲೆಯನ್ನು 3 ರೂಪಾಯಿ ಏರಿಸಲು ಹಾಗೂ ತಿಂಡಿ ತಿನಿಸುಗಳ ದರ 5 ಹಾಗೂ ಊಟದ ದರ 10 ರೂಪಾಯಿ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದಾರೆ.