(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.01. ಕಾಲು ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆಯಲೆಂದು ಆಂಧ್ರಪ್ರದೇಶದ ಪುತ್ತೂರಿಗೆ ತೆರಳಬೇಕಿದ್ದ ಮಹಿಳೆಯೋರ್ವರು ವಿಳಾಸದ ಗೊಂದಲದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸಿ ಇತ್ತ ವಿಳಾಸ ಸಿಗದೆ, ಅತ್ತ ಊರಿಗೂ ಹೋಗಲು ದುಡ್ಡಿಲ್ಲದೆ ಒದ್ದಾಡುತ್ತಿದ್ದ ಮಹಿಳೆಯೋರ್ವರಿಗೆ ಪುತ್ತೂರು ಶಾಸಕಿ ಸಹಾಯಹಸ್ತ ನೀಡಿದ ಘಟನೆ ಬುಧವಾರದಂದು ಸಂಜೆ ನಡೆದಿದೆ.
ಮುರಿತಕ್ಕೊಳಗಾಗಿದ್ದ ಮಂಡ್ಯ ಮೂಲದ ಬಡ ಮಹಿಳೆ ಚಿಕಿತ್ಸೆಗೆಂದು ಪ್ರಸಿದ್ಧ ನಾಟಿ ಮದ್ದು ನೀಡಲಾಗುವ ಆಂಧ್ರಪ್ರದೇಶದ ಪುತ್ತೂರಿಗೆಂದು ಹೊರಟಿದ್ದರು. ಆದರೆ ವಿಳಾಸದ ಗೊಂದಲದಿಂದಾಗಿ ದಕ್ಷಿಣ ಕನ್ನಡದ ಪುತ್ತೂರಿಗೆ ಆಗಮಿಸಿದ ಅವರ ಕೈಯಲ್ಲಿದ್ದ ದುಡ್ಡು ಖಾಲಿಯಾಗಿ ಊರಿಗೆ ತೆರಳಲು ದುಡ್ಡಿಲ್ಲದೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ದಾನಿಗಳತ್ತ ಕೈಚಾಚುತ್ತಿದ್ದರು. ಬುಧವಾರ ಸಂಜೆ ಗ್ರಹಣ ನಿಮಿತ್ತ ದೇವಸ್ಥಾನಕ್ಕೆ ಆಗಮಿಸಿದ ಪುತ್ತೂರು ಶಾಸಕಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶ್ರೀಮತಿ ಶಕುಂತಲಾ ಶೆಟ್ಟಿಯವರು ನರಳಾಡುತ್ತಿದ್ದ ಮಹಿಳೆಯನ್ನು ಕಂಡು ನೆರವಿಗೆ ಧಾವಿಸಿದರು. ಪ್ರಥಮ ಚಿಕಿತ್ಸೆ ನೀಡಿದ ನಂತರ ಮಹಿಳೆಯನ್ನು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ನಂತರ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ರಕ್ಷಾ ಸಮಿತಿಯ ಮೂಲಕ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ತನ್ನ ಕ್ಷೇತ್ರದ ಮತದಾರರ ಹಿತವನ್ನು ಕಾಪಾಡಲು ಹಿಂದುಮುಂದು ನೋಡುವ ಕೆಲವು ಜನಪ್ರತಿನಿಧಿಗಳ ನಡುವೆ ತನ್ನದಲ್ಲದ ಊರಿನ ಮಹಿಳೆಗೆ ಚಿಕಿತ್ಸೆಗೆ ನೆರವಾಗಿರುವ ಪುತ್ತೂರಿನವರ ಪ್ರೀತಿಯ ಶಕು ಅಕ್ಕನವರ ಮಾನವೀಯ ಮೌಲ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.