(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಫೆ.01. ನಾಲ್ಕು ತಿಂಗಳ ಹೆಣ್ಣು ಮಗುವೊಂದನ್ನು ರಸ್ತೆ ಬದಿ ಬಿಟ್ಟು ಹೋಗಿರುವ ಘಟನೆ ಚಿಕ್ಕಬಳ್ಳಾಪುರದ ಪೊಶೆಟ್ಟಿಹಳ್ಳಿ ಗ್ರಾಮದಲ್ಲಿ ಬುಧವಾರದಂದು ಬೆಳಿಗ್ಗೆ ನಡೆದಿದೆ.
ಪೊಶೆಟ್ಟಿಹಳ್ಳಿ ಗ್ರಾಮದ ಹೋಟೆಲೊಂದರ ಬಳಿ ಮಗುವೊಂದರ ಆಕ್ರಂದನ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಗ್ರಾಮಸ್ಥರಿಗೆ ಅಚ್ಚರಿ ಕಾದಿತ್ತು. ಯಾರೋ ನಾಲ್ಕು ತಿಂಗಳ ಹೆಣ್ಣು ಮಗುವೊಂದನ್ನು ಬಿಟ್ಟು ಹೋಗಿದ್ದನ್ನು ಕಂಡು ಗ್ರಾಮದ ನರಸಪ್ಪ ಎಂಬವರ ಕುಟುಂಬವು ಮಗುವನ್ನು ರಕ್ಷಿಸಿ ಆರೈಕೆ ಮಾಡಿದೆ. ಬಳಿಕ ಈ ಬಗ್ಗೆ ಸ್ಥಳೀಯರು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮಗುವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅನೈತಿಕ ಸಂಬಂಧದಿಂದ ಮಗು ಹುಟ್ಟಿದ್ದರಿಂದಾಗಿ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರಬಹುದೆಂದು ಶಂಕಿಸಲಾಗಿದ್ದು, ಚಿಕ್ಕಬಳ್ಳಾಫುರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.