“ಮರುಜಲೀಕರಣ (ORS) ದ್ರಾವಣ ದಿನ” – ಜುಲೈ 29- ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಜು. 29. ಪ್ರತೀ ವರ್ಷ ಜುಲೈ 29ರಂದು ಭಾರತದಾದ್ಯಂತ “ಮರುಜಲೀಕರಣ ದ್ರಾವಣ ದಿನ ಅಥವಾ ಓಆರ್.ಎಸ್ ದಿನ” ಎಂದು ಆಚರಿಸಿ ವಾಂತಿ, ಬೇಧಿ ಮತ್ತು ಅತಿಸಾರದಿಂದ ಉಂಟಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಿ, ಓಆರ್.ಎಸ್ ಬಳಕೆಯಿಂದ ಉಂಟಾಗುವ ಲಾಭ ಮತ್ತು ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. 2001ರಲ್ಲಿ ಈ ಆಚರಣೆ ಜಾರಿಗೆ ಬಂದಿತು. ಭಾರತೀಯ ಮಕ್ಕಳ ತಜ್ಞರ ಒಕ್ಕೂಟ, ಎಳೆ ಮಕ್ಕಳಲ್ಲಿ ಬೇಧಿ, ಅತಿಸಾರದಿಂದ ಉಂಟಾಗುವ ಮಾರಣಾಂತಿಕ ತೊಂದರೆಗಳನ್ನು ನಿವಾರಿಸುವ ಸದುದ್ದೇಶದಿಂದ ಕೇಂದ್ರ ಸರಕಾರದ ಆರೋಗ್ಯ ಇಲಾಖೆಯ ಜೊತೆಗೂಡಿ ‘ಜೀವ ಉಳಿಸುವ ಓಆರ್.ಎಸ್’ ಎಂಬ ಘೋಷವಾಕ್ಯದೊಂದಿಗೆ ಈ ಅಭಿಯಾನವನ್ನು ಆರಂಭಿಸಿತ್ತು. ಬೇಧಿ ಮತ್ತು ಅತಿಸಾರ ಮಕ್ಕಳಲ್ಲಿ ಕಾಡುವ ಬಹುದೊಡ್ಡ ಸಮಸ್ಯೆಯಾಗಿದ್ದು ವಾರ್ಷಿಕವಾಗಿ ಭಾರತ ದೇಶವೊಂದರಲ್ಲಿಯೇ 6 ಲಕ್ಷ ಮಂದಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಸುಮಾರು ಸರಾಸರಿ 1666 ಮಕ್ಕಳು ಪ್ರತಿ ದಿನ ಬೇಧಿಯಿಂದಾಗಿ ಸಾಯುತ್ತಿರುವುದು ಬಹಳ ಸೋಜಿಗದ ಸಂಗತಿ. ಆರಂಭಿಕ ಹಂತದಲ್ಲಿಯೇ ಭೇದಿಯನ್ನು ಗುರುತಿಸಿ ಈ ಓಆರ್.ಎಸ್ ದ್ರಾವಣ ನೀಡಿದ್ದಲ್ಲಿ 90 ಶೇಕಡ ಮಕ್ಕಳ ಸಾವನ್ನು ತಡೆಯಬಹುದು ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಈ ಕಾರಣದಿಂದಲೇ ಮಳೆಗಾಲದಲ್ಲಿ ಕಲುಷಿತ ನೀರು ಮತ್ತು ಆಹಾರದಿಂದಾಗಿ ಹೆಚ್ಚು ಕಾಡುವ ವಾಂತಿ ಬೇಧಿ ಅತಿಸಾರವನ್ನು ನಿಯಂತ್ರಿಸುವ ಸಲುವಾಗಿ ಮಳೆಗಾಲ ಆರಂಭವಾಗುವ ಜುಲೈ ತಿಂಗಳಲ್ಲಿಯೇ ಈ ಓಆರ್.ಎಸ್ ದಿನ ಆಚರಿಸಲಾಗುತ್ತದೆ.

ಬಳಸುವುದು ಹೇಗೆ?

ಒಂದು ಲೀಟರ್ ಮತ್ತು 200 ಮೀ.ಲೀನಲ್ಲಿ ಮಿಶ್ರ ಮಾಡಬಹುದಾದ 2 ರೀತಿಯ ಪೊಟ್ಟಣಗಳಲ್ಲಿ ಓಆರ್.ಎಸ್ ಲಭ್ಯವಿರುತ್ತದೆ. ಪೊಟ್ಟಣದ ಮೇಲಿರುವ ಸೂಚನೆ ಮತ್ತು ಸಲಹೆಗಳನ್ನು  ಅನುಸರಿಸಿ,  ಪರಿಶುದ್ಧ ನೀರಿನಲ್ಲಿ ಮಿಶ್ರ ಮಾಡತಕ್ಕದ್ದು. ಪತ್ರಿ ಬಾರಿ ಬೇಧಿಯಾದಾಗಲೂ 80ರಿಂದ 100 ಮೀ.ಲೀ.ನಷ್ಟು ನೀರಿನಂಶ ನಷ್ಟವಾಗುವುದರಿಂದ ಅಷ್ಟೇ ಪ್ರಮಾಣದ ಓಆರ್.ಎಸ್ ಮರುಪೂರಣ ಮಾಡಬೇಕು. ಸಾಮಾನ್ಯವಾಗಿ ಒಮ್ಮೆ ತಯಾರಿಸಿದ ಈ ದ್ರಾವಣವನ್ನು ತಕ್ಷಣವೇ ಬಳಸಬೇಕು. ಈಗ ಲಭ್ಯವಾದ ನವೀನ ಮಾದರಿಯ ದ್ರಾವಣಗಳನ್ನು 24 ಗಂಟೆಗಳ ಕಾಲ ಶೇಖರಿಸಿ ಇಡಬಹುದು. ಒಂದು ವೇಳೆ ಓಆರ್.ಎಸ್ ದ್ರಾವಣದ ಲಭ್ಯತೆ ಇಲ್ಲವಾದಲ್ಲಿ, ಮನೆಯಲ್ಲಿಯೇ ಸಕ್ಕರೆ ಮತ್ತು ಉಪ್ಪನ್ನು ನೀರಿಗೆ ಬೇರೆಸಿ, ದ್ರಾವಣ ತಯಾರಿಸಬಹುದು. ಇದಲ್ಲದೆ ಉಪ್ಪು ಮಿಶ್ರಿತ ಮಜ್ಜಿಗೆ, ಉಪ್ಪು ಮಿಶ್ರಿತ ತಾಜಾ ಹಣ್ಣಿನರಸ, ಉಪ್ಪು ಬೆರೆಸಿದ ಸೂಪು, ಎಳನೀರು ಮುಂತಾದ ದ್ರಾವಣಗಳನ್ನು ಬಳಸಬಹುದು. ಏನೂ ಲಭ್ಯವಿಲ್ಲದಿದ್ದಲ್ಲಿ ಶುದ್ಧವಾದ ನೀರಿಗೆ ಉಪ್ಪು ಬೆರೆಸಿ ಬಳಸಬಹುದು. ಸಾಮಾನ್ಯವಾಗಿ ಮಕ್ಕಳಿಗೆ ಬೇಧಿಯಾದಾಗ ರೋಗಿಯ ಶರೀರದಿಂದ ಸಾಕಷ್ಟು ಪ್ರಮಾಣದ ಸೋಡಿಯಂ, ನೀರು, ಪೋಟೆಷಿಯಾಂ ಮುಂತಾದ ಲವಣಾಂಶಗಳು ಸೋರಿ ಹೋಗುತ್ತದೆ. ಇದರಿಂದಾಗಿ ನಿರ್ಜಲೀಕರಣ ಮತ್ತು ರಕ್ತದಲ್ಲಿನ ಲವಣಾಂಶಗಳ ಪ್ರಮಾಣಗಳ ಏರುಪೇರಿನಿಂದಾಗಿ ಸ್ನಾಯು ಸೆಳೆತ ಉಸಿರಾಟದಲ್ಲಿ ಏರುಪೇರು, ನಾಡಿ ಬಡಿತದಲ್ಲಿ ಏರುಪೇರು, ರಕ್ತದೊತ್ತಡ ಕಡಿಮೆಯಾಗುವುದು, ಅಪಸ್ಮಾರ, ಕರುಳಿನ ನಿಶ್ಚಲತೆ, ಮೂತ್ರದ ಪ್ರಮಾಣದಲ್ಲಿ ತೀವ್ರ ಇಳಿಕೆ ಮುಂತಾದ ಗಂಭೀರ ಸಮಸ್ಯೆ ಉಂಟಾಗುತ್ತದೆ. ಓಆರ್‍.ಎಸ್ ಬಳಕೆಯಿಂದ ಈ ಎಲ್ಲಾ ತೊಂದರೆಗಳನ್ನು ತಪ್ಪಿಸಬಹುದಾಗಿದೆ.

Also Read  ಆ್ಯಪಲ್ ಕಂಪನಿಯ ಐಫೋನ್ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಬಿಡುಗಡೆ..!

ಏನಿದು ಓ.ಆರ್.ಎಸ್?

ವಿಶ್ವಸಂಸ್ಥೆ ನಿಗದಿಪಡಿಸಿದ ಓ.ಆರ್.ಎಸ್ ದ್ರಾವಣದಲ್ಲಿ ಕೇವಲ ಗ್ಲೂಕೋಸ್ ಮತ್ತು ಸೋಡಿಯಂ ಪ್ರಮಾಣ ಅಧಿಕವಾಗಿದ್ದು, ಯಾವುದೇ ರುಚಿ ಮತ್ತು ಪರಿಮಳವಿಲ್ಲದ ಕಾರಣ ಮಗುವಿಗೆ ಯಾವುದೇ ರುಚಿ ನೀಡುತ್ತಿರಲಿಲ್ಲ. ಈ ಕಾರಣದಿಂದ ಹೆಚ್ಚಿನ ಮಕ್ಕಳು ಈ ದ್ರಾವಣವನ್ನು ಕುಡಿಯಲು ಕೇಳುತ್ತಿರಲಿಲ್ಲ ಮತ್ತು ಬೇದಿ ಸುಲಭವಾಗಿ ನಿಯಂತ್ರಣಕ್ಕೆ ಬರುತ್ತಿರಲಿಲ್ಲ ಮತ್ತು ಬಹಳ ಕಾಲ ಶೇಖರಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣದಿಂದ ಈಗ ಕಡಿಮೆ ಸಾಂಧ್ರತೆಯ ಹೆಚ್ಚುಕಾಲ ಶೇಖರಿಸಿಡಲು ಸಾಧ್ಯವಾಗುವಂತಹ ಓ.ಆರ್.ಎಸ್. ದ್ರಾವಣವನ್ನು ತಯಾರಿಸಲಾಗಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಹಿಂದೆ ಅಮಿನೋ ಆಮ್ಲ ಆಧಾರಿತ, ಸಿಟ್ರೇಟ್ ಆಧಾರಿತ ಮತ್ತು ಮೊದಲೇ ಬೇಯಿಸಿದ ಅಕ್ಕಿ ಆಧಾರಿತ ಓ.ಆರ್.ಎಸ್ ಎಂದು ಬೇರೆ ಬೇರೆ ರೀತಿಯ ದ್ರಾವಣ ಲಭ್ಯವಿದೆ. ಇದೀಗ ಲಭ್ಯವಿರುವ ಸುಧಾರಿತ ಕಡಿಮೆ ಸಾಂದ್ರತೆಯ ಓ.ಆರ್.ಎಸ್. ರುಚಿಕರವಾಗಿದ್ದು, ಮಕ್ಕಳ ನಾಲಿಗೆಗೆ ಹಿತಕರವಾಗಿದೆ. ಹೆಚ್ಚಿನ ಎಲ್ಲಾ ಓ.ಆರ್.ಎಸ್ ದ್ರಾವಣಗಳಲ್ಲಿ ಸೋಡಿಯಂ, ಪೊಟಾಸಿಯಂ, ಮತ್ತು ಗ್ಲೂಕೋಸ್ ಅಂಶಗಳು ಹೇರಳವಾಗಿದ್ದು, ಇದರಿಂದ ನಿರ್ಜಲೀಕರಣವಾಗಿದ್ದ ದೇಹಕ್ಕೆ ಸಾಕಷ್ಟು ನೀರು ಮತ್ತು ಲವಣಾಂಶಗಳು ದೊರೆತು ಮರುಜಲೀಕರಣವಾಗಿ ಮಗುವಿಗೆ ಮಾರಣಾಂತಿಕ ತೊಂದರೆಯಾಗದಂತೆ ತಡೆಯುತ್ತದೆ.

ವಹಿಸಬೇಕಾದ ಎಚ್ಚರಿಕೆಗಳು

ಒ.ಆರ್.ಎಸ್. ಬಳಸುವಾಗ ಕೆಲವೊಂದು ವಿಶೇಷವಾದ ಎಚ್ಚರಿಕೆಯನ್ನು ತಾಯಂದಿರು ವಹಿಸಬೇಕಾಗುತ್ತದೆ.

  1. ಅತಿಯಾದ ನಿರ್ಜಲೀಕರಣ ಉಂಟಾದಾಗ (ಅನಿಯಂತ್ರಿತವಾದ ವಾಂತಿಬೇಧಿ ಮತ್ತು ಅತಿಸಾರದಿಂದಾಗಿ) ಮಗು ಬಿಳಿಚಿಕೊಳ್ಳುವುದು, ಮಗುವಿನ ಬಾಯಿ ಒಣಗುವುದು, ಮಗು ಮಂಕಾಗುವುದು, ವಿರಳವಾದ ಮೂತ್ರ ವಿಸರ್ಜನೆ ಮುಂತಾದ ಲಕ್ಷಣಗಳು ಕಾಣಿಸಿಕೊಂಡಾಗ ಯಾವುದೇ ಸಮಯ ವ್ಯರ್ಥ ಮಾಡದೆ ಮಗುವನ್ನು ವೈದ್ಯರ ಬಳಿ ತೋರಿಸಬೇಕು. ಈ ಹಂತದಲ್ಲಿ ಓ.ಆರ್.ಎಸ್. ಬಳಕೆಯಿಂದ ಯಾವುದೇ ಉಪಯೋಗವಿಲ್ಲ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಸೇರಿಸಿ ರಕ್ತನಾಳದ ಮುಖಾಂತರ ಪೋಷಕಾಂಶಯುಕ್ತ ದ್ರಾವಣ ನೀಡಬೇಕಾಗುತ್ತದೆ. ಇದಲ್ಲದೆ ಕಲುಷಿತ ನೀರು ಮತ್ತು ಆಹಾರದಿಂದಾಗಿ ಜ್ವರ ಮತ್ತು ಸೋಂಕು ತಗುಲಿದ್ದಲ್ಲಿ ರಕ್ತನಾಳಗಳ ಮುಖಾಂತರ ಆಂಟಿಬಯೋಟಿಕ್ ನೀಡಬೇಕಾದ ಅನಿವಾರ್ಯತೆ ಇರುತ್ತದೆ. ಒಮ್ಮೆ ಮಗು ಚೇತರಿಸಿದ ಬಳಿಕ ಬಾಯಿಯ ಮುಖಾಂತರ ಆಹಾರ ಸೇವಿಸುವ ಶಕ್ತಿ ಬಂದ ಬಳಿಕ ಓ.ಆರ್.ಎಸ್.ದ್ರಾವಣ ನೀಡಬಹುದು.
  2. ಮಕ್ಕಳಲ್ಲಿ ಬೇಧಿಯ ಜೊತೆಗೆ ರಕ್ತವೂ ಸೋರಿ ಹೋಗುತ್ತಿದ್ದಲ್ಲಿ ಬರೀ ಓ.ಆರ್.ಎಸ್. ದ್ರಾವಣ ಉಪಯೋಗಕ್ಕೆ ಬರಲಿಕ್ಕಿಲ್ಲ.
  3. ಓ.ಆರ್.ಎಸ್. ದ್ರಾವಣ ನೀಡುವಾಗ ಸಾಮಾನ್ಯವಾಗಿ ಮಕ್ಕಳು ವಾಂತಿ ಮಾಡಿಕೊಳ್ಳತ್ತಾರೆ. ಮಕ್ಕಳು ವಾಂತಿ ಮಾಡಿಕೊಳ್ಳುತ್ತದೆ ಎಂದು ಕುಡಿಸದೇ ಇರಬಾರದು. ಐದು ನಿಮಿಷ ವಿಶ್ರಾಂತಿ ನೀಡಿ ಪುನಃ ನೀಡಬೇಕು, ಕೆಲವೊಮ್ಮೆ ತಾಯಂದಿರು ಓ.ಆರ್.ಎಸ್. ಕುಡಿಸಿದ ಕೂಡಲೇ ಮಗು ಬೇದಿ ಮಾಡುತ್ತದೆ ಎಂದು ಹೆದರಿ ಕುಡಿಸುವುದೇ ಇಲ್ಲ. ಪ್ರತಿ ಬಾರಿ ಬೇಧಿ ಮಾಡಿದಾಗಲೂ 50 ರಿಂದ 100 ಮಿ.ಲೀ ಓ.ಆರ್.ಎಸ್. ದ್ರಾವಣ ನೀಡಲೇಬೇಕು.
Also Read  ನೀವು ಇಷ್ಟಪಡುವಂತಹ ವ್ಯಕ್ತಿ ನಿಮ್ಮವರಂತೆ ಆಗಲು ಈ ಒಂದು ತಂತ್ರವನ್ನು ಮಾಡಿ

ಕೊನೆ ಮಾತು:

ಎಳೆ ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ಅನಿಯಂತ್ರಿತ ಬೇಧಿ ಮತ್ತು ವಾಂತಿಯಾದಾಗ ನಿರ್ಜಲೀಕರಣ ಬಹಳ ಬೇಗ ಉಂಟಾಗುತ್ತದೆ. ಬರೀ ನೀರನ್ನು ಮಕ್ಕಳು ಸುಲಭವಾಗಿ ಕುಡಿಯುವುದಿಲ್ಲ. ಯಾವುದೇ ಕಾರಣಕ್ಕೂ ಎದೆ ಹಾಲನ್ನು ಕುಡಿಸುವುದನ್ನು ನಿಲ್ಲಿಸಲೇಬಾರದು. ಯಾಕೆಂದರೆ ಎದೆ ಹಾಲಿನಲ್ಲಿ ಇರುವ ಪೌಷ್ಠಿಕಾಂಶಗಳನ್ನು ಯಾವುದೇ ಕೃತಕ ದ್ರಾವಣಗಳಿಂದ ಪೂರೈಸಲು ಸಾಧ್ಯವಿಲ್ಲ. ಇದರ ಜೊತೆಗೆ ಎದೆ ಹಾಲಿನಲ್ಲಿರುವ ನೈಸರ್ಗಿಕ ರೋಗ ನಿರೋಧಕ ಆಂಟಿಬಾಡಿಗಳು ಅಥವಾ ರೋಗ ಪ್ರತಿಬಂಧಕಾಯಗಳು ಇರುವುದರಿಂದ ಶೀಘ್ರವಾಗಿ ಬೇಧಿಯನ್ನು ನಿಯಂತ್ರಿಸುತ್ತದೆ ಮತ್ತು ಮಗುವಿಗೆ ಸೋಂಕು ತಡೆಯುವಲ್ಲಿ ಮುಖ್ಯ ಭೂಮಿಕೆ ವಹಿಸುತ್ತದೆ. ಮಗು ಆಹಾರ ಸೇವಿಸುವ ಸ್ಥಿತಿಯಲ್ಲಿ ಇದ್ದರೆ ಅಕ್ಕಿಯಿಂದ ತಯಾರಾದ ಮೃದುವಾದ ಚೆನ್ನಾಗಿ ಬೇಯಿಸಿದ ಅನ್ನ, ಗಂಜಿ, ಇಡ್ಲಿ ಮುಂತಾದ ವಸ್ತುಗಳನ್ನು ನೀಡಿದಲ್ಲಿ, ಮಲವನ್ನು ಗಟ್ಟಿಯಾಗಿಸಲು ಸಹಾಯಕಾರಿಯಾಗುತ್ತದೆ. ಯಾವುದೇ ಕಾರಣಕ್ಕೂ ಸರಾಗವಾಗಿ ಮಲ ವಿಸರ್ಜಿಸಲು ಸಹಕಾರಿಯಾಗುವ ನಾರುಯುಕ್ತ ಸೊಪ್ಪು, ತರಕಾರಿ, ಕಾಯಿಪಲ್ಲೆಗಳು ಮತ್ತು ಹಣ್ಣು ಹಂಪಲುಗಳನ್ನು ನೀಡಬಾರದು. ಇವುಗಳನ್ನು ನೀಡಿದಲ್ಲಿ ಬೇಧಿ ಮತ್ತಷ್ಟು ಜಾಸ್ತಿಯಾಗಿ ಸಮಸ್ಯೆ ಉಲ್ಭಣವಾಗುತ್ತದೆ. ಸಾಮಾನ್ಯವಾಗಿ ಬೇಧಿಯಾಗುವಾಗ ಸತು ಎಂಬ ಸೂಕ್ಷ್ಮ ಪೋಷಕಾಂಶ ನಷ್ಟವಾಗುವುದರಿಂದ ಕರುಳಿನ ಜೀವಕೋಶಗಳ ಮೇಲೆ ಜಾಸ್ತಿ ಹಾನಿಯಾಗುವ ಸಾಧ್ಯತೆ ಇರುತ್ತದೆ. ಓ.ಆರ್.ಎಸ್. ದ್ರಾವಣದ ಜೊತೆ ಸತುವಿನ ಅಂಶ ನೀಡುವುದರಿಂದ ಹಾನಿಗೊಳಗಾದ ಕರುಳಿನ ಜೀವಕೋಶಗಳು ಪುನಶ್ಚೇತನಗೊಂಡು ಬೇಧಿ ಬಹಳ ವೇಗವಾಗಿ ನಿಯತ್ರಿಸಲ್ಪಡುತ್ತದೆ. ಒಟ್ಟಿನಲ್ಲಿ ಓ.ಆರ್.ಎಸ್. ದ್ರಾವಣ, ವಾಂತಿ ಬೇಧಿಯಿಂದಾಗುವ ನಿರ್ಜಲೀಕರಣವನ್ನು ಸರಿಪಡಿಸಲು ಅತಿ ಸುಲಭದ ಕಡಿಮೆ ಖರ್ಚಿನ ಮತ್ತು ಜೀವರಕ್ಷಕ ದ್ರಾವಣ ಎಂದರೂ ಅತಿಶಯೋಕ್ತಿಯಾಗಲಾರದು.

Also Read  ➤ಬೇಸಿಗೆಯಲ್ಲಿ ಐಸ್ಕೋಲ್ಡ್ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆ ಹಲವು

ಡಾ| ಮುರಲೀಮೋಹನ್ ಚೂಂತಾರು

error: Content is protected !!
Scroll to Top