ಜೀವಹಾನಿ ತಡೆಗಟ್ಟಲು ಜಿಲ್ಲಾಡಳಿತ ಸನ್ನದ್ದ- ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 29. ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳಿಂದ ಜೀವ ಹಾನಿಯನ್ನು ತಡೆಗಟ್ಟಲು ಜಿಲ್ಲಾಡಳಿತ ಸರ್ವ ರೀತಿಯಲ್ಲಿ ಸನ್ನದ್ದವಾಗಿದ್ದು, ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತಿಳಿಸಿದರು. ಅವರು ಶುಕ್ರವಾರದಂದು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಮಳೆಗಾಲದಲ್ಲಿ ಜನರ ಜೀವ ರಕ್ಷಿಸಲು ಜಿಲ್ಲೆಯಲ್ಲಿ ನಿರ್ಬಂಧ ಹೇರಲಾದ ಪ್ರದೇಶಗಳಿಗೆ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರು ತೆರಳಬಾರದು. ಈಗಾಗಲೇ ಜಿಲ್ಲೆಯ ಸಮುದ್ರ ಕಿನಾರೆಗಳು, ದೇವಸ್ಥಾನದ ಹತ್ತಿರದ ನದಿಗಳು, ಸ್ನಾನ ಘಟ್ಟಗಳು, ಚಾರಣ ತಾಣಗಳಿಗೆ ತೆರಳದಂತೆ ನಿರ್ಬಂಧಿಸಲಾಗಿದೆ. ಅದನ್ನ ಉಲ್ಲಂಘಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಜಿಲ್ಲೆಯ ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ನೀರು ಹರಿಯುತ್ತಿರುವ ಸ್ಥಳಗಳಿಗೆ ಪ್ರವೇಶ ನಿರ್ಬಂಧದ ಬಗ್ಗೆ ಸೂಚನೆ ನೀಡುವಂತೆ ತಿಳಿಸಿದ್ದು, ಅದನ್ನು ಮೀರುವಂತಿಲ್ಲ. ಚಾರಣೀಗರು ನಿಷೇಧಿತ ಸ್ಥಳಗಳಲ್ಲಿ ಕಂಡುಬಂದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜುರುಗಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಪ್ರದೇಶಗಳನ್ನು ಪ್ರಾಕೃತಿಕ ವಿಕೋಪಕ್ಕೆ ಒಳಗಾಗುವ ಅಪಾಯಕಾರಿ ಪ್ರದೇಶಗಳು ಎಂದು ಗುರುತಿಸಲಾಗಿದ್ದು, ಅದರೊಂದಿಗೆ ಜಿಲ್ಲೆಯೊಳಗೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ 87 ಸ್ಥಳಗಳನ್ನು ಅಪಾಯ ಸ್ಥಳಗಳೆಂದು ಗುರುತಿಸಲಾಗಿದೆ.  ಚಾರ್ಮಾಡಿ ಘಾಟಿಯಲ್ಲಿ 34 ಕಡೆಗಳಲ್ಲಿ ಅಪಾಯ ಸ್ಥಳಗಳನ್ನು ಗುರುತಿಸಲಾಗಿದೆ, ಅಪಾಯಕಾರಿ ಸಂದರ್ಭ ಎದುರಾಗುವಾಗ ಅಲ್ಲಿ ಸಾರ್ವಜನಿಕರು, ಪ್ರಯಾಣಿಕರು ತೆರಳಬಾರದು ಎಂದರು.

Also Read  ತಾಳೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು...!

ಜಿಲ್ಲೆಯಲ್ಲಿ ಈಗಾಗಲೇ 25 ಎನ್‍ಡಿಆರ್‍ಎಫ್, 38 ಎಸ್‍ಡಿಆರ್‍ಎಫ್, 190 ಅಗ್ನಿಶಾಮಕ ದಳ ಹಾಗೂ 76 ಜನ ಗೃಹ ರಕ್ಷಕ ದಳ ಸಿಬ್ಬಂದಿಯನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ, ಜಿಲ್ಲೆಯಲ್ಲಿ ಪ್ರತೀ ಗ್ರಾಮ ಮಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆಯಲ್ಲಿ ವಾರ್ಡ್ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ಕೇಂದ್ರಗಳನ್ನು ತೆರೆಯಲಾಗಿದೆ. ಅದಕ್ಕೆ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಅಲ್ಲಿ ಏನಾದರೂ ಅಪಾಯ ಸಂಭವಿಸಿದಲ್ಲಿ ನೋಡಲ್ ಅಧಿಕಾರಿಗಳಿಗೆ ತಿಳಿಸಿದರೆ ಅವರು ಕ್ರಮ ಕೈಗೊಳ್ಳಲಿದ್ದಾರೆ. ಹೆಚ್ಚಿನ ಕ್ರಮ ಜರುಗಬೇಕಾಗಿದ್ದಲ್ಲಿ ತಹಶೀಲ್ದಾರ್ ಗೆ ಅವರು  ತಿಳಿಸಲಿದ್ದಾರೆ. ಇದಕ್ಕಾಗಿ ಜಿಲ್ಲೆಯಾಧ್ಯಂತ 34 ಕಂಟ್ರೋಲ್ ರೂಂ. ತೆರೆಯಲಾಗಿದ್ದು, ಅವರಿಗೆ ಕರೆ ಮಾಡುವಂತೆ ಕೋರಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಅವರು ಮಾತನಾಡಿ, ಹೊರಗಿನಿಂದ ಜಿಲ್ಲೆಯ ದೇವಸ್ಥಾನಕ್ಕೆ ಬರುವವರು ಸಾಕಷ್ಟು ಜಾಗೃತಿ ವಹಿಸಬೇಕಾಗಿದೆ. ಅಗತ್ಯವಿದ್ದರೆ ಮಾತ್ರ ಬರುವುದು ಸೂಕ್ತ. ಈಗಾಗಲೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವಂತಹ 2 ರಸ್ತೆಗಳು ಮುಚ್ಚಲಾಗಿದೆ. ರಸ್ತೆ ತಡೆ ಉಂಟಾದಲ್ಲಿ ಸಮಸ್ಯೆಯಾಗಲಿದೆ. ಹೊರಗಿನಿಂದ ಬರುವವರು ನೀರಿಗೆ ಇಳಿಯುವುದು, ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆಯುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.  ನಗರ ಪೊಲೀಸ್ ಆಯುಕ್ತ ಕುಲ್‍ದೀಪ್ ಕುಮಾರ್ ಜೈನ್ ಮಾತನಾಡಿ, ಹೊರ ಜಿಲ್ಲೆಯಿಂದ ಇಲ್ಲಿಗೆ ಬರುವವರು ಮಳೆ ಸಂದರ್ಭದಲ್ಲಿ ಗೂಗಲ್ ಮ್ಯಾಪ್ ಬಳಸುವುದು ಸೂಕ್ತ. ಯಾವ ರಸ್ತೆಯನ್ನು ಮುಚ್ಚಿದೆ, ಎಷ್ಟು ಗಂಟೆಯಿಂದ ಎಷ್ಟು ಗಂಟೆಯ ತನಕ ಮುಚ್ಚಲಾಗುವುದು ಎಂಬ ಮಾಹಿತಿ ಲಭಿಸಲಿದೆ, ಇದರಿಂದ ಅವರ ಪ್ರಯಾಣಕ್ಕೆ ಅನುಕೂಲವಾಗುವುದು ಎಂದರು.

Also Read  ರಾಷ್ಟ್ರೀಯ ಕೃಷಿ ವಿಜ್ಞಾನಿಗಳಿಂದ ತರಬೇತಿ ಕಾರ್ಯಕ್ರಮ

error: Content is protected !!
Scroll to Top