(ನ್ಯೂಸ್ ಕಡಬ) newskadaba.com ಮಂಗಳೂರು, ಜು. 29. ಕಲಿಕೆ ಎಂಬುದು ಸಮಗ್ರವಾದ ಸಂತೋಷ ನೀಡುವ, ಕ್ರಿಯಾಶೀಲತೆಯನ್ನು ಉದ್ದೇಪಿಸುವ ಚಟುವಟಿಕೆಯಾಗಿರಬೇಕು, ಇದೇ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಆಶಯ ಎಂದು ಎಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯ ನಂ-2ರ ಪ್ರಾಂಶುಪಾಲ ಎನ್.ಎಸ್. ಯಾದವ್ ಅವರು ಹೇಳಿದರು.
ಅವರು ಶುಕ್ರವಾರದಂದು ಎಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯ ನಂ-2ರಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮೂರನೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಜಿಲ್ಲೆಯ ಸಿಬಿಎಸ್‍ಇ ಮತ್ತು ಇತರೆ ವಿದ್ಯಾಲಯಗಳ ಪ್ರಾಂಶುಪಾಲರು ಹಾಗೂ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು. ಶಾಲೆಯ ಹಿರಿಯ ಪ್ರಾಥಮಿಕ ಶಿಕ್ಷಕಿ ಶ್ರೀಮತಿ ಶೀಜಾ ನಂಬಿಯಾರ್ ಶಾಲೆಯ ಚಟುವಟಿಕೆಗಳ ಕುರಿತು ಮಾತನಾಡಿದರು. ಮುಡಿಪು ನವೋದಯ ವಿದ್ಯಾಲಯದ ಪ್ರಾಂಶುಪಾಲ ರಾಜೇಶ್ ನೀತಿಯು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಬೀರಿದ ಪ್ರಭಾವವನ್ನು ಶಿಕ್ಷಣದ ಗುಣಮಟ್ಟದಲ್ಲಾದ ಬೆಳವಣಿಗೆ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದರು. ಮಣಿಪಾಲ್ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅನುರಾಧ ಶಿವರಾಂ ತಮ್ಮ ವಿದ್ಯಾಲಯದಲ್ಲಿ ಶಿಕ್ಷಣದ ವೈವಿಧ್ಯತೆ ಕಲಿಕೆಯ ಬಹುರೂಪತೆಯ ಬಗ್ಗೆ ವಿವರಿಸಿದರು. ವಿವಿಧ ಶಾಲೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಸ್ನಾತಕೋತ್ತರ ಶಿಕ್ಷಕಿ ಶ್ರೀಮತಿ ಬಿಂದು ಭಾಸ್ಕರನ್ ನಿರೂಪಿಸಿದರು. ಹಿರಿಯ ಸ್ನಾತಕೋತ್ತರ ಶಿಕ್ಷಕ ಪ್ರತೀಶ್ ಸಿ ಪಿ, ವಂದಿಸಿದರು.