(ನ್ಯೂಸ್ ಕಡಬ) newskadaba.com ತುಮಕೂರು, ಜು. 28. ಇಲ್ಲಿನ ಗೊಲ್ಲರಹಟ್ಟಿ ಎಂಬಲ್ಲಿ ಮೈಲಿಗೆ ಎಂದು ಬಾಣಂತಿ ಹಾಗೂ ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿದ್ದರಿಂದ ಅನಾರೋಗ್ಯಕ್ಕೆ ತುತ್ತಾಗಿ ಮಗು ಮೃತಪಟ್ಟ ಘಟನೆಗೆ ಸಂಬಂಧಿಸಿ ಬಾಣಂತಿ ವಸಂತಾ ಪತಿ ಸಿದ್ದೇಶ್, ಮಾವ ಚಿಕ್ಕಹುಲಿಯಪ್ಪ, ಸಿದ್ದೇಶ್ ಕುಟುಂಬ ಹಾಗೂ ಸಮುದಾಯದ ಮುಖಂಡರ ವಿರುದ್ಧ ಕೋರಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹಿರಿಯ ಸಿವಿಲ್ ನ್ಯಾಯ್ಯಾಧೀಶರಾದ ನೂರುನ್ನೀಸ್ ಗ್ರಾಮಕ್ಕೆ ಭೇಟಿ ನೀಡಿ ಬಾಣಂತಿ ವಸಂತಾರವರ ಆರೋಗ್ಯ ವಿಚಾರಿಸಿ, ಬಳಿಕ ಗ್ರಾಮಸ್ಥರು ಹಾಗೂ ಸ್ಥಳೀಯ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂದಿದ್ದಾರೆ.
ಸಿದ್ದೇಶ್ ಮತ್ತು ವಸಂತಾ ದಂಪತಿಯ ಶೀತದಿಂದ ಬಳಲುತ್ತಿದ್ದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ ಎನ್ನಲಾಗಿದೆ.
ಇನ್ನು ಕುಟುಂಬಸ್ಥರು ಮೈಲಿಗೆ ಎಂಬ ಕಾರಣದಿಂದ ಬಾಣಂತಿ ಹಾಗೂ ಮಗುವನ್ನು ಗಾಳಿ, ಮಳೆ ಇದ್ದರೂ ಅದನ್ನು ಲೆಕ್ಕಿಸದೇ ಊರ ಹೊರಗಿಟ್ಟಿದ್ದರು. ಇದರಿಂದ ಮಗುವಿಗೆ ಅನಾರೋಗ್ಯ ಕಾನಿಸಿಕೊಂಡಿತ್ತು ಎನ್ನಲಾಗಿದೆ. ವಸಂತ ಕಳೆದ ತಿಂಗಳು ಜೂನ್ 22ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಏಳು ತಿಂಗಳಲ್ಲಿ ಹೆರಿಗೆ ಆಗಿದ್ದರಿಂದ ಒಂದು ಮಗು ಮೃತಪಟ್ಟು, ಇನ್ನೊಂದು ಮಗು ಬದುಕುಳಿದಿತ್ತು.