ಶೌಚಾಲಯದಲ್ಲಿ ವಿಡಿಯೋ ಪ್ರಕರಣ- ಯಾವುದೇ ಸಾಕ್ಷ್ಯ ಸಿಕ್ಕಿಲ್ಲ; ಕೋಮುಬಣ್ಣ ಬಳಿಯದಂತೆ ಖುಷ್ಬೂ ಸುಂದರ್‌

(ನ್ಯೂಸ್ ಕಡಬ) newskadaba.com  ಉಡುಪಿ, ಜು. 27. ಉಡುಪಿ ಖಾಸಗಿ ಕಾಲೇಜೊಂದರ ಶೌಚಾಲಯದಲ್ಲಿ ವಿದ್ಯಾರ್ಥಿನಿಯೋರ್ವಳು ಖಾಸಗಿ ವಿಡಿಯೋ ಸೆರೆ ಪ್ರಕರಣದಲ್ಲಿ ಈವರೆಗೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಈ ಪ್ರಕರಣಕ್ಕೆ ಕೋಮುಬಣ್ಣ ಬಳಿಯಬೇಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಖುಷ್ಬೂ ಸುಂದರ್‌ ತಿಳಿಸಿದರು.

ಪ್ರಕರಣದ ತನಿಖೆಗೆ ರಾಷ್ಟ್ರೀಯ ಮಹಿಳಾ ಆಯೋಗ ಮುಂದಾಗಿದ್ದು, ಅದರ ಭಾಗವಾಗಿ ನಟಿ ಹಾಗೂ ಆಯೋಗದ ದಕ್ಷಿಣ ಭಾರತದ ಮಹಿಳಾ ಸದಸ್ಯೆ ಖುಷ್ಬೂ ಸುಂದರ್‌ ಉಡುಪಿಗೆ ಭೇಟಿ ನೀಡಿ ಅಲ್ಲಿನ ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪೊಲೀಸರು ಕಳೆದ ಎರಡು ದಿನದ ತನಿಖೆಯ ಹಾಗೂ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಖುಷ್ಬೂ, ಖಾಸಗಿ ವಿಡಿಯೋ ಮಾಡಿದ್ದಾರೆ ಎನ್ನಲಾದ ಆರೋಪಿತ ಮೂವರು ವಿದ್ಯಾರ್ಥಿನಿಯರ ಮೊಬೈಲ್‌ ನಲ್ಲಿ ಯಾವುದೇ ವಿಡಿಯೋ ಕಂಡು ಬಂದಿಲ್ಲ. ಸಂಬಂಧಪಟ್ಟ ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಪರೀಕ್ಷೆ ಮಾಡಿದ್ದು, ಅದರಲ್ಲಿ ಏನೂ ಪತ್ತೆಯಾಗಿಲ್ಲ. ಮೂರು ಮೊಬೈಲ್‌ ಗಳ ಡೇಟಾ ಸಂಗ್ರಹ ಮಾಡಿದ್ದಾರೆ. ಜತೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ಕಳುಹಿಸಿಕೊಡಲಾಗುತ್ತಿದ್ದು, ಅಲ್ಲಿನ ವರದಿ ಬಂದ ಬಳಿಕ ಸ್ಪಷ್ಟತೆ ಸಿಗಬಹುದು ಎಂದರು.

Also Read  ಬಂಟ್ವಾಳ ತಾಲೂಕು ಸಾಮಾನ್ಯ ಸಭೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ದೊರೆಯದೆ ಆ ಮೂವರು ಯುವತಿಯರನ್ನು ಅಪರಾಧಿ ಎನ್ನಲು ಸಾಧ್ಯವಿಲ್ಲ. ಅವರಿನ್ನು ಆರೋಪಿಗಳು ಅಷ್ಟೇ. ಸೂಕ್ತ ಸಾಕ್ಷಿ ಸಿಗದೇ ಹೋದರೆ ಚಾರ್ಜ್ ಶೀಟ್ ಮಾಡಲು ಸಾಧ್ಯವಿಲ್ಲ. ಸಾಕ್ಷವಿಲ್ಲದಿದ್ದರೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಸದ್ಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ಖುಷ್ಬೂ ತಿಳಿಸಿದರು.

ವಿಡಿಯೊ ಪ್ರಕರಣಕ್ಕೆ ಉಗ್ರರ ಸಂಬಂಧವಿದೆ ಎಂದು ಈಗಾಗಲೇ ವಾಟ್ಸಾಪ್ ಸಂದೇಶಗಳು ಹರಿದಾಡುತ್ತಿವೆ. ಇದಕ್ಕೆ ನಾವೇ ನ್ಯಾಯಾಧೀಶರಾಗಿ ತೀರ್ಪು ಕೊಡುವುದು ಬೇಡ. ಮಹಿಳಾ ಆಯೋಗ ಮತ್ತು ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಎಳೆಯ ಮನಸ್ಸುಗಳು ಒಳಗೊಂಡಿವೆ. ಮಹಿಳಾ ಆಯೋಗ ಈ ಪ್ರಕರಣಕ್ಕೆ ಯಾವುದೇ ಕೋಮು ಬಣ್ಣ ಬಳಿಯಲು ಬಂದಿಲ್ಲ.. ಯಾವುದೇ ರಾಜಕೀಯ ಒತ್ತಡವಿಲ್ಲದೆ ಕೋಮು ಪ್ರಭಾವವಿಲ್ಲದೆ ತನಿಖೆ ನಡೆಸುತ್ತೇವೆ. ದಯವಿಟ್ಟು ಈ ಪ್ರಕರಣಕ್ಕೆ ಯಾವುದೇ ಕೋಮು ಬಣ್ಣ ಬಳಿಯ ಬೇಡಿ ಎಂದು ಮನವಿ ಮಾಡಿದ್ದಾರೆ.

Also Read  25 ಸಾವಿರ ಹೂಡಿಕೆಯಿಂದ ಯಶಸ್ವಿ ರೈತನಾದ ಸುಳ್ಯದ ವ್ಯಕ್ತಿ

error: Content is protected !!
Scroll to Top