(ನ್ಯೂಸ್ ಕಡಬ) newskadaba.com ಮಂಗಳೂರು, ಜು. 25. ಅಣಕು ಕಾರ್ಯಚರಣೆಯಲ್ಲಿ ಯಾವುದೇ ರೀತಿಯ ಆಪತ್ತುಗಳು ಎದುರಾಗದಂತೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅವರು ಸೋಮವಾರದಂದು ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ತಿಂಗಳ 31ರಂದು ನಿಗದಿಪಡಿಸಲಾಗಿರುವ ವಿಮಾನ ದುರಂತದ ಜಂಟಿ ಅಣಕು ಪ್ರದರ್ಶನದ ಪೂರ್ವಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾಡಳಿತ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಅದಾನಿ ವಿಮಾನ ನಿಲ್ದಾಣದ ಸಹಭಾಗಿತ್ವದಲ್ಲಿ ಜು.31 ರಂದು ಬೆಳಗ್ಗೆ 11 ರಿಂದ 12 ಗಂಟೆಯೊಳಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಲಿರುವ ವಿಮಾನ ದುರಂತದ ಅಣಕು ಪ್ರದರ್ಶನದಲ್ಲಿ ಸೋಡಿಯಂ ಆಸಿಟೇಡ್ ಎಂಬ ರಾಸಾಯನಿಕವನ್ನು ಹೊತ್ತು ತರುವ ಇಂಡಿಗೋ ಡೋಮೆಸ್ಟಿಕ್ ವಿಮಾನವು ಜಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೆ ಈಡಾಗುತ್ತದೆ, ಈ ಸಂದರ್ಭದಲ್ಲಿ ವಿಮಾನದಿಂದ ಸೋರಿಕೆಯಾಗುವ ಸೋಡಿಯಂ ಅಸಿಟೇಡ್ ರಾಸಾಯನಿಕದಿಂದಾಗಿ ಸಮೀಪದಲ್ಲಿಯೇ ಇರುವ ಶಾಲಾ ಮಕ್ಕಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಯಾವುದೇ ರೀತಿಯ ಅನಾಹುತವಾಗದಂತೆ ಕೈಗೊಳ್ಳಬೇಕಾದ ಕ್ರಮಗಳು, ಆಂಬುಲೇನ್ಸ್, ಸಮೀಪದ ಆಸ್ಪತ್ರೆಗಳು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು ಸೇರಿದಂತೆ ಸುರಕ್ಷಿತ ಆಶ್ರಯ ತಾಣಗಳು, ಆಸ್ಪತ್ರೆಗಳ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಗ್ರಾಮಸ್ಥರು ಹಾಗೂ ಸಮೀಪದ ಶಾಲೆಗೆ ಈ ಬಗ್ಗೆ ಪೂರ್ವಭಾವಿಯಾಗಿ ಮಾಹಿತಿ ನೀಡುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ಅಣಕು ಕಾರ್ಯಾಚರಣೆಯಲ್ಲಿ ಪೊಲೀಸ್, ಅಗ್ನಿಶಾಮಕ ದಳ, ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಸಕ್ರಿಯವಾಗಿ ಭಾಗವಹಿಸಲಿದ್ದು, ಜಿಲ್ಲಾಡಳಿತದಿಂದ ಅಗತ್ಯ ನೆರವು ನೀಡಲಾಗುವುದು ಎಂದರು.
ಸಿಐಎಸ್‍ಎಫ್‍ನ ಸೀನಿಯರ್ ಕಮಾಂಡೆಂಟ್ ವಿ.ಎಂ. ಜೋಶಿ, ಅದಾನಿ ವಿಮಾನ ನಿಲ್ದಾಣದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಬಾಯ್ಲರ್ಸ್ ಮತ್ತು ಕಾರ್ಖಾನೆಗಳ ಉಪನಿರ್ದೇಶಕ ಡಾ. ರಾಜೇಶ್ ಮಿಶ್ರಿಕೋಟೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಅಗ್ನಿಶಾಮಕ ಇಲಾಖೆಯ ಮುಖ್ಯಸ್ಥ ಭರತ್ ಕುಮಾರ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಕಂದಾಯ ನಿರೀಕ್ಷಕ ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಸಿಐಎಸ್‍ಎಫ್, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಭಾರತೀಯ ನೌಕಾಪಡೆಯ ಅಧಿಕಾರಿಗಳು ಸಭೆಯಲ್ಲಿದ್ದರು.