(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.29. ಮುಸ್ಲಿಂ ಮಹಿಳೆಯರಲ್ಲಿ ನಾಯಕತ್ವದ ಗುಣ ಬೆಳೆಸಲು ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಜಾರಿಗೆ ತಂದಿರುವ ‘ನಯೀ ರೋಶನಿ’ ಯೋಜನೆಯಲ್ಲಿ 16 ಸಾವಿರ ಮುಸ್ಲಿಂ ಮಹಿಳೆಯರು ಭಾಗೀದಾರರಾಗಿದ್ದು, ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 27 ಸಾವಿರ ಮಂದಿ ಬಿಜೆಪಿ ಸದಸ್ಯತ್ವ ಪಡೆಯುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದ್ದಾರೆ.
ಕಮಲ ಪಾಳಯದ ನಾಯಕರು ಅಲ್ಪಸಂಖ್ಯಾತ ಸಮುದಾಯದಲ್ಲಿ ಸದ್ದಿಲ್ಲದೇ ನಡೆಸುತ್ತಿರುವ ಈ ಅಭಿಯಾನ ಚುನಾವಣಾ ಹೊಸ್ತಿಲಲ್ಲಿ ಮಹತ್ವ ಪಡೆದಿದ್ದು, ತ್ರಿವಳಿ ತಲಾಖ್ ಸೇರಿದಂತೆ ಮುಸ್ಲಿಂ ಸಮುದಾಯದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ‘ನಯೀ ರೋಶನಿ’ಯ ಮಹಿಳಾ ಬಲವನ್ನು ಬಳಸಿಕೊಳ್ಳುವುದಕ್ಕೆ ಬಿಜೆಪಿ ಸಿದ್ಧತೆ ನಡೆಸಿದೆ. ಕೇಸರಿ ಪಕ್ಷದ ಕಚೇರಿಯಲ್ಲಿ ಮುಸ್ಲಿಂ ಮಹಿಳೆಯರು ಸಂಘಟನಾ ಸಭೆ ನಡೆಸುವುದು ಸಾಧ್ಯವೇ ? ಎಂಬ ಪ್ರಶ್ನೆಗೆ ಈ ಯೋಜನೆಯಿಂದ ಉತ್ತರ ಸಿಕ್ಕಂತಾಗಿದೆ. ಬೆಂಗಳೂರು, ಕೋಲಾರ, ಶಿವಮೊಗ್ಗ, ಗುಲ್ಬರ್ಗ, ಹಾವೇರಿಯಂಥ ಜಿಲ್ಲೆಗಳ ಮುಸ್ಲಿಂ ಬಾಹುಳ್ಯ ಕ್ಷೇತ್ರಗಳು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ‘ನಯೀ ರೋಶನಿ’ ಸದಸ್ಯತ್ವ ಅಭಿಯಾನ ವಿಸ್ತರಿಸಿದ್ದು, ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿ ಡಿಸೋಜಾ ಇದರ ಮುಂದಾಳತ್ವ ವಹಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದಲ್ಲಿ ಚರ್ಚೆಗೆ ಕಾರಣವಾಗಿರುವ ಈ ನಯೀ ರೋಶನಿಯ ಸೃಷ್ಟಿಗೆ ಕಾರಣವಾಗಿರುವುದು ಬಿಜೆಪಿ ರಾಜ್ಯ ನಾಯಕತ್ವವಲ್ಲ, ಇದು ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರ ಟ್ರಂಫ್ ಕಾರ್ಡ್. ಕೇಂದ್ರ ಸರಕಾರದ ಅಲ್ಪಸಂಖ್ಯಾತ ಇಲಾಖೆ ಮೂಲಕ ಅಲ್ಪಸಂಖ್ಯಾತ ಸಮುದಾಯದಲ್ಲಿ ನಾಯಕತ್ವ ಗುಣ ಬೆಳೆಸುವುದಕ್ಕೆ ಹಾಗೂ ಸಾಮಾಜಿಕ ಜಾಗೃತಿಗಾಗಿ ಪ್ರಾರಂಭಿಸಿದ್ದ ಈ ಕಾರ್ಯಕ್ರಮ ಸದ್ಯಕ್ಕೆ ರಾಜ್ಯ ಬಿಜೆಪಿಗರ ಪಾಲಿಗೆ ಸಂಘಟನೆ ದೃಷ್ಟಿಯಿಂದ ಹೊಸ ಬೆಳಕಾಗಿದ್ದು ಸುಳ್ಳಲ್ಲ. ಆರಂಭಿಕ ಅಡತಡೆಯ ಮಧ್ಯೆಯೇ ಈಗ ನಯೀ ರೋಶನಿಗೆ 16000 ಸದಸ್ಯರಾಗಿದ್ದು, ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್‌ನಿಂದ ತಲಾ ಇಬ್ಬರು ಮಹಿಳೆಯರನ್ನು ನೇಮಕ ಮಾಡಲಾಗಿದೆ. ಆದರೆ ಇದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಾರಿಗೆ ತಂದಿರುವ ನವಶಕ್ತಿ ಯೋಜನೆ ವ್ಯಾಪ್ತಿಗೆ ಸೇರಿಲ್ಲ. ನವಶಕ್ತಿ ಯೋಜನೆ ಪ್ರಕಾರ ಬಿಜೆಪಿ ನಾಯಕರು ಪ್ರತಿ ಬೂತ್‌ನಲ್ಲಿ ತಲಾ ಇಬ್ಬರು ಮುಸ್ಲಿಂ ಸದಸ್ಯರನ್ನು ನೇಮಕ ಮಾಡಬೇಕಾದ ಇನ್ನೊಂದು ಹೊಣೆಗಾರಿಕೆ ಇದೆ.
ಈ ಯೋಜನೆಯ ಬಗ್ಗೆ ಹೇಳಿಕೆ ನೀಡಿರುವ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಂ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೇಂದ್ರ ಸರಕಾರ ‘ ತ್ರಿವಳಿ ತಲಾಕ್’ ರದ್ದು ಮಾಡಿ ಕಾಯ್ದೆ ತಂದ ಹಿನ್ನೆಲೆಯಲ್ಲಿ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಶರಿಯತ್ತಿನಲ್ಲಿ ಮೂಗು ತೂರಿಸುತ್ತಿದೆ ಎಂದು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಬಿಜೆಪಿ ನಯೀ ರೋಶನಿ ಕಾರ್ಯಕರ್ತರನ್ನು ಬಳಕೆ ಮಾಡಿಕೊಳ್ಳಲಿದೆ ಎಂದು ಹೇಳಿದರು. ಈ ದೇಶದಲ್ಲಿ ಸಂವಿಧಾನವೇ ಎಲ್ಲ ಕಾನೂನುಗಳ ತಾಯಿ. ಸಂವಿಧಾನಕ್ಕೆ ಒಪ್ಪಿತವಾಗದ ವಿಷಯಗಳು ಯಾವುದೇ ಧರ್ಮದಲ್ಲಿದ್ದರೂ, ಅದನ್ನು ಸುಧಾರಣೆ ಮಾಡಬೇಕಾಗುತ್ತದೆ. ಕೇಂದ್ರ ಸರಕಾರದ ಈ ಕ್ರಮವನ್ನು ಅಲ್ಪಸಂಖ್ಯಾತರ ವಿರೋಧಿ ಧೋರಣೆ ಎಂದು ವಿನಾ ಕಾರಣ ಹುಯಿಲೆಬ್ಬಿಸುತ್ತಿದ್ದಾರೆ. ಇದು ಕೂಡಾ ವೋಟ್ ಬ್ಯಾಂಕ್ ರಾಜಕಾರಣದ ತಂತ್ರ. ಇದರ ವಿರುದ್ಧ ನಾವೆಲ್ಲ ಹೋರಾಡಬೇಕಿದೆ ಎಂದರು.
ಕೇಂದ್ರ ಸರಕಾರದ ಕಾರ್ಯಕ್ರಮಗಳ ಬಗ್ಗೆ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ನಯೀ ರೋಶನಿ ಯೋಜನೆಯಲ್ಲಿ ಯಾವುದೇ ವೋಟ್ ಬ್ಯಾಂಕ್ ಉದ್ದೇಶವಿಲ್ಲ. ಈ ಸಮುದಾಯದ ಮಹಿಳೆಯರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳಿಗೆ ನಾವು ಧ್ವನಿಯಾಗುತ್ತಿದ್ದೇವೆ,” ಎನ್ನುತ್ತಾರೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಶ್ಮಿ ಡಿಸೋಜಾ. ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ರಶ್ಮಿ ಡಿಸೋಜಾ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಕಟ್ಟಾ ಅಭಿಮಾನಿ. ಕೆಲ ದಿನಗಳ ಹಿಂದೆ ಅನಾಥ ಶಿಶುವನ್ನು ಅವರು ದತ್ತು ಪಡೆದಿದ್ದು, ಅದಕ್ಕೆ ಅಬ್ದುಲ್ ಕಲಾಂ ಎಂದೇ ಹೆಸರಿಟ್ಟಿದ್ದಾರೆ. ಸಾಮಾಜಿಕ ಸಾಮರಸ್ಯಕ್ಕೆ ಕಲಾಂ ಆದರ್ಶ ಪಾಲನೆ ಅಗತ್ಯ ಎಂಬುದು ರಶ್ಮಿ ಡಿಸೋಜಾ ನಂಬಿಕೆ.
ಕೃಪೆ: ವಿಜಯ ಕರ್ನಾಟಕ