ಭಾರೀ ಗಾಳಿಮಳೆಗೆ ಬಿದ್ದ ಬೃಹತ್ ಮರ- ಮನೆಗೆ ಭಾಗಶಃ ಹಾನಿ – ಮಕ್ಕಳಿಬ್ಬರು ಅದೃಷ್ಟವಶಾತ್ ಪಾರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು. 22. ಭಾರೀ ಗಾಳಿಮಳೆಗೆ ಬೃಹತ್ ಗಾತ್ರದ ಮರವೊಂದು ಗಾಳಿಗೆ ಉರುಳಿ ಬಿದ್ದು ಎರಡು ಮನೆಗಳು ಧ್ವಂಸಗೊಂಡ ಘಟನೆ ಇಲ್ಲಿನ ಹಳೆಗೇಟು ಸಮೀಪದ ಕಜೆಕ್ಕಾರು ಅಂಬೇಡ್ಕರ್ ಕಾಲನಿಯಲ್ಲಿ ಶನಿವಾರದಂದು ಸಂಜೆ ನಡೆದಿದೆ.


ಘಟನೆಯ ಸಂದರ್ಭ ಮನೆಯೊಳಗಿದ್ದ ಮಕ್ಕಳಿಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ಭಾರೀ ಗಾಳಿ ಬೀಸಿದ್ದು, ಇದರಿಂದಾಗಿ ಭಾರೀ ಗಾತ್ರದ ಹಲಸಿನ ಮರ ಹಾಗೂ ತೆಂಗಿನ ಮರಗಳು ಅಕ್ಕಪಕ್ಕದಲ್ಲಿರುವ ಸುಂದರಿ ಮತ್ತು ಸೇಸಮ್ಮ ಅವರ ಮನೆಯ ಮೇಲೆ ಉರುಳಿ ಬಿದ್ದಿದೆ.

ಗಾಳಿ ಬರುವಾಗ ಮನೆಯಲ್ಲಿ ಒಬ್ಬಂಟಿಯಾಗಿದ್ದ ಸೇಸಮ್ಮ ಅವರು ಹೆದರಿ ಪಕ್ಕದ ಮನೆಗೆ ತೆರಳಿದ್ದರೆ, ಸುಂದರಿಯವರ ಮನೆಯಲ್ಲಿ ಅವರ ಮಗನ ಮಕ್ಕಳಾದ ಅಕ್ಷತಾ (11) ಹಾಗೂ ರಕ್ಷಿತಾ (10) ಮಲಗಿದ್ದರು ಎನ್ನಲಾಗಿದೆ. ಸುಂದರಿ ಹಾಗೂ ಅವರ ಸೊಸೆ ಮೀನಾಕ್ಷಿ ಮನೆಯ ಹೊರಗೆ ಬಂದಿದ್ದರು. ಈ ಸಂದರ್ಭ ಹಲಸಿನ ಮರ ಮಗುಚಿ ಬಿದ್ದಿದ್ದು, ಅದರೊಟ್ಟಿಗೆ ತೆಂಗಿನ ಮರವೂ ಮಗುಚಿ ಬಿದ್ದಿದೆ. ಇದರಿಂದಾಗಿ ಮನೆಯ ಮೇಲ್ಚಾವಣಿ, ಗೋಡೆ ಧ್ವಂಸಗೊಂಡಿದೆ. ತಕ್ಷಣವೇ ಮನೆಯೊಳಗೆ ಮಲಗಿದ್ದ ಮಕ್ಕಳನ್ನು ಹೊರಗೆ ಕರೆತರಲಾಗಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಎರಡೂ ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.

Also Read  ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್‌ನಲ್ಲಿ ಸ್ಕೈ ಡೈನಿಂಗ್ ಆರಂಭ

error: Content is protected !!
Scroll to Top