(ನ್ಯೂಸ್ ಕಡಬ) newskadaba.com ಮಂಗಳೂರು, ಜು. 22. ರಾಜ್ಯ ಸರ್ಕಾರದ ಗ್ಯಾರಂಟಿಗಳ ಪೈಕಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ನೋಂದಣಿ ಆರಂಭವಾದ ಎರಡನೇ ದಿನದಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು 5,621 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವರದಿ ತಿಳಿಸಿದೆ.
ಮೊದಲ ದಿನ ಸರ್ವರ್ ಸಮಸ್ಯೆಯಿಂದ 1,217 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದ್ದವು. ಎರಡನೇ ದಿನ ಸರ್ವರ್ ಡೌನ್ ಆಗಿದ್ದರೂ, ಕೆಲವೇ ಸಮಯದಲ್ಲಿ ಸರಿಯಾಗಿದ್ದು, ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ. ಜಿಲ್ಲೆಯ ಎಲ್ಲಾ 223 ಗ್ರಾಮ ಪಂಚಾಯತ್, 60 ಸ್ಥಳೀಯ ಸಂಸ್ಥೆಗಳು ಹಾಗೂ 179 ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆಯಾಗುತ್ತಿದೆ.
ಶುಕ್ರವಾರದಂದು ಹೆಚ್ಚುವರಿಯಾಗಿ ಬಂಟ್ವಾಳದ 43 ಕೇಂದ್ರಗಳಲ್ಲಿ 1,256 ಅರ್ಜಿಗಳು, ಬೆಳ್ತಂಗಡಿಯ 31 ಕೇಂದ್ರಗಳಲ್ಲಿ 1,026 ಅರ್ಜಿಗಳು, ಕಡಬದ 20 ಕೇಂದ್ರಗಳಲ್ಲಿ 757 ಅರ್ಜಿಗಳು, ಮಂಗಳೂರಿನ 16 ಕೇಂದ್ರಗಳಲ್ಲಿ 692 ಅರ್ಜಿಗಳು, ಮೂಡುಬಿದಿರೆಯ ಆರು ಕೇಂದ್ರಗಳಲ್ಲಿ 312 ಅರ್ಜಿಗಳು, ಮೂಲ್ಕಿಯ ನಾಲ್ಕು ಕೇಂದ್ರಗಳಲ್ಲಿ 216 ಅರ್ಜಿಗಳು, ಪುತ್ತೂರಿನ 25 ಕೇಂದ್ರಗಳಲ್ಲಿ 467 ಅರ್ಜಿಗಳು, ಸುಳ್ಯದ 15 ಕೇಂದ್ರಗಳಲ್ಲಿ 406 ಅರ್ಜಿಗಳು, ಉಳ್ಳಾಲದ 19 ಕೇಂದ್ರಗಳಲ್ಲಿ 489 ಅರ್ಜಿಗಳು ಆನ್ಲೈನ್ ಮೂಲಕ ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮೂಲಗಳು ತಿಳಿಸಿದೆ.