(ನ್ಯೂಸ್ ಕಡಬ) newskadaba.com ಮಂಗಳೂರು, ಜು. 22. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಾಲಕ್ಕೆ ಸಂಬಂಧಿಸಿದ ಮೊಬೈಲ್ ಆ್ಯಪ್ ಜಾಲಕ್ಕೆ ಬಲಿಯಾಗದಂತೆ ಎಚ್ಚರ ವಹಿಸುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಈ ಆ್ಯಪ್‌ಗಳು ಸುಳ್ಳು ಸಾಲದಿಂದ ಕೂಡಿವೆ. ಕೆಲವು ಮಂದಿ ತಮ್ಮ ಮೊಬೈಲ್‌ಗಳಲ್ಲಿ ಇಂತಹ ಆ್ಯಪ್‌ಗಳನ್ನು ಯಾವುದೇ ರೀತಿ ಪರಿಶೀಲನೆ ಮಾಡದೇ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಈ ಆ್ಯಪ್‌ಗಳಲ್ಲಿ ಬಹಳಷ್ಟು ಕಡಿಮೆ ದರದಲ್ಲಿ ಮತ್ತು ಆಕರ್ಷಕ ರೀತಿಯ ಮರು ಪಾವತಿಯ ಆಸೆಯನ್ನು ತೋರಿಸಿ ಸಾಲ ನೀಡುವ ಭರವಸೆಯನ್ನು ನೀಡಲಾಗುತ್ತದೆ. ಪತ್ತೆಯಾಗದ ಮೂಲಗಳಿಂದ ಮಾಡಿದ ವಿಡಿಯೋ ಕಾಲ್ ಮೂಲಕ ಸಾರ್ವಜನಿಕರನ್ನು ಈ ಒಂದು ಜಾಲಕ್ಕೆ ಸೆಳೆಯಲಾಗುತ್ತದೆ. ಹಾಗಾಗಿ ಸಾರ್ವಜನಿಕರು ತಮಗೆ ಬರುವಂತಹ ಕರೆಗಳು ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಿಂದ ಬರಲಾಗಿದೆ ಎಂದು ಭಾವಿಸುತ್ತಾರೆ. ಲೋನ್ ಪ್ರಕ್ರಿಯೆಯನ್ನು ಪೂರೈಸುವ ನೆಪದಲ್ಲಿ ಬ್ಯಾಂಕ್ ಖಾತೆಯ ವಿವರ ಮತ್ತು ವೈಯಕ್ತಿಕ ವಿವರಗಳನ್ನು ಭಾವಚಿತ್ರದ ಸಮೇತ ಪಡೆಯಲಾಗುತ್ತದೆ. ಬಳಿಕ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿ ಡಾರ್ಕ್ ಡೆಟ್ಸ್ ಟ್ರ್ಯಾಪ್ ಪ್ರಾರಂಭಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇಂತಹ ಸೈಬರ್ ವಂಚಕರು ಸಾಲ ಮರುಪಾವತಿಯ ನೆಪದಲ್ಲಿ ಬ್ಲಾಕ್‌ಮೇಲ್ ಮಾಡಲು ಪ್ರಾರಂಭಿಸುತ್ತಾರೆ. ಅವರ ಬಳಿ ಇರುವ ಭಾವಚಿತ್ರಗಳು ಅಶ್ಲೀಲ ರೀತಿಯಲ್ಲಿ ಪ್ರಕಟಿಸುವ ಬೆದರಿಕೆಯನ್ನು ನೀಡುತ್ತಾರೆ ಮತ್ತು ಪ್ರಕಟಿಸಿ ಮಾನಸಿಕ ಹಿಂಸೆಯನ್ನು ನೀಡುತ್ತಾರೆ. ಹಾಗಾಗಿ ಇಂತಹ ಲೋನ್ ಆ್ಯಪ್‌ಗಳನ್ನು ನಂಬಿ ಮೋಸಹೋಗಬಾರದು. ಚೀನಾ ಮೂಲದ ಹಲವು ಸಾಲ ವಂಚನೆ ಆ್ಯಪ್‌ಗಳಾಗಿವೆ. ಭಾರದಲ್ಲಿ ಸುಮಾರು 600 ಆ್ಯಪ್‌ಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ಆದರೂ ಕೂಡ ಪ್ರತಿನಿತ್ಯ ಯಾವುದಾದರೂ ಹೊಸದೊಂದು ಲೋನ್ ಆ್ಯಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಈ ಮೂಲಕ ನಾಗರಿಕರಲ್ಲಿ ಇಂತಹ ಆ್ಯಪ್‌ಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡದಂತೆ ಆಯುಕ್ತರು ಮನವಿ ಮಾಡಿದ್ದಾರೆ.