(ನ್ಯೂಸ್ ಕಡಬ) newskadaba.com ನವದೆಹಲಿ, ಜು.21. ಕಳೆದ 79 ದಿನಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಎರಡು ಸಮುದಾಯಗಳ ನಡುವಿನ ಹಿಂಸಾಚಾರದಲ್ಲಿ ಹಲವು ಸಾವು ನೋವುಗಳು ಸಂಭವಿಸಿದ್ದರೂ, ಸೈಲೆಂಟ್ ಆಗಿದ್ದ ಸರಕಾರದ ವಿರುದ್ಧ ಕೋರ್ಟ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕೇಂದ್ರ ಸರಕಾರದ ವಿರುದ್ಧ ಕಲ್ಕತ್ತಾದ ಆಂಗ್ಲ ಪತ್ರಿಕೆಯೊಂದು ವ್ಯಂಗ್ಯಭರಿತವಾಗಿ ವರದಿ ಮಾಡಿದೆ.
ಮಣಿಪುರದಲ್ಲಿ ಮೇ ತಿಂಗಳಲ್ಲಿ ನಡೆದಿದೆ ಎನ್ನಲಾದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆಯ ವೀಡಿಯೋ ತಡವಾಗಿ ವೈರಲ್ ಆದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸರಕಾರದ ವಿರುದ್ಧ ತಪರಾಕಿ ನೀಡಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರವು ಮೌನ ಮುರಿಯದಿದ್ದರೆ ಕೋರ್ಟ್ ಕ್ರಮ ಕೈಗೊಳ್ಳುವುದೆಂದು ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಪ್ರಧಾನಿ ಮೋದಿ, ಮಣಿಪುರ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಬೆನ್ನಲ್ಲೇ ಘಟನೆಗೆ ಕಾರಣರಾದ ಹಲವರನ್ನು ಬಂಧಿಸಲಾಗಿದ್ದು, ಇನ್ನೂ ಹಲವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ನಡುವೆ ಪ್ರಧಾನ ಮಂತ್ರಿ ಮೋದಿಯವರು 78 ದಿನಗಳ ಕಾಲ ಸುಮ್ಮನಿದ್ದು, ಕೊನೆಗೂ ಮಾತೆತ್ತಿದ್ದಾರೆ ಎಂದು ಅಣಕಿಸಿ ಪಶ್ಚಿಮ ಬಂಗಾಳದ ಇಂಗ್ಲೀಷ್ ಪತ್ರಿಕೆ ‘ದಿ ಟೆಲಿಗ್ರಾಫ್’ 2023 ಜುಲೈ 21 ಶುಕ್ರವಾರದ ತನ್ನ ಪತ್ರಿಕೆಯ ಮುಖಪುಟದಲ್ಲಿ ಮೊಸಳೆ ಕಣ್ಣೀರು ಹಾಕಿದ ಫೋಟೋವನ್ನು ಪ್ರಕಟಿಸಿದೆ. ಅದರಲ್ಲಿ 56 ಇಂಚಿನ ಚರ್ಮವನ್ನು ಚುಚ್ಚಲು 79 ದಿನಗಳ ನೋವು ಮತ್ತು ಅವಮಾನವನ್ನು ತೆಗೆದುಕೊಂಡಿತು ಎಂಬ ತಲೆಬರಹದೊಂದಿಗೆ 78 ದಿನಗಳ ಕಾಲ ಸುಮ್ಮನಿದ್ದ ಮೊಸಳೆಯು 79ನೇ ದಿನ ಕಣ್ಣೀರು ಹಾಕುವುದನ್ನು ವ್ಯಂಗ್ಯವಾಗಿ ಚಿತ್ರಿಸಲಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.