(ನ್ಯೂಸ್ ಕಡಬ) newskadaba.com ಮೈಸೂರು, ಜು. 21. ದಿನದಿಂದ ದಿನಕ್ಕೆ ಪುಂಡರ ಹಾವಳಿ ಹೆಚ್ಚುತ್ತಿದ್ದು, ರಸ್ತೆಗಳಲ್ಲಿ ವೀಲಿಂಗ್ ಮಾಡುವ ಮೂಲಕ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದೀಗ ಅಂತಹದೇ ಘಟನೆಯೊಂದು ವರದಿಯಾಗಿದ್ದು, ವೀಲಿಂಗ್ ಮಾಡುತ್ತಿದ್ದ ಯುವಕರು ಶಿಕ್ಷಕಿಯೋರ್ವರ ಸ್ಕೂಟರ್ ಗೆ ಢಿಕ್ಕಿ ಹೊಡೆದು ಶಿಕ್ಷಕಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ.
ಶಿಕ್ಷಕಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಗಾಯತ್ರಿಪುರಂ ಚರ್ಚ್ ಬಳಿ ಕೆಟಿಎಂ ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಮೂಲಕ ವೀಲಿಂಗ್ ಮಾಡುತ್ತಾ ಬಂದ ಪುಂಡರು ಎದುರಿನಿಂದ ಬರುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ವಿಪರೀತ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ್ದ ಶಿಕ್ಷಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರನಿಗಾ ಘಟಕದಲ್ಲಿ ಶಿಕ್ಷಕಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಘಟನೆಯ ಕುರಿತು ಸಿದ್ದಾರ್ಥನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ವಶಕ್ಕೆ ಪಡೆಯಲಾಗಿದೆ.