(ನ್ಯೂಸ್ ಕಡಬ) newskadaba.com ಮಡಿಕೇರಿ, ಜು. 20. ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಸಮೀಪಿಸುತ್ತಿದ್ದು, ಈ ಹಿನ್ನೆಲೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಜುಲೈ 21 ರಂದು ರಾಜ್ಯದ ಈ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 308(ಎ)(ಸಿ) ರಂತೆ ಮತ್ತು ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರ್ತುಗಳು) ನಿಯಮಗಳು 1967 ರ ನಿಯಮ 10-ಬಿ ಅಡಿಯಲ್ಲಿ ಪ್ರತ್ಯಾಯೋಜಿತವಾಗಿರುವ ಅಧಿಕಾರದಂತೆ ಜುಲೈ, 21 ರ ಸಂಜೆ 5 ಗಂಟೆಯಿಂದ ಜುಲೈ, 23 ರ ಮಧ್ಯರಾತ್ರಿ 12 ಗಂಟೆಯವರೆಗೆ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು, ಮಡಿಕೇರಿ ತಾಲ್ಲೂಕಿನ ಕಾಂತೂರು ಮೂರ್ನಾಡು ಮತ್ತು ಕಡಗದಾಳು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಎಲ್ಲಾ ವಿಧದ ಮದ್ಯ ತಯಾರಿಕೆ, ಸಾಗಾಣಿಕೆ, ಶೇಖರಣೆ ಮತ್ತು ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೋಟೆಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ.