(ನ್ಯೂಸ್ ಕಡಬ) newskadaba.com ಕುಂತೂರು, ಜು. 19. ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ಸ್ಥಾಪನೆಗೆ ಪ್ರೇರಕರಾಗಿ ಕಾರಣಕರ್ತರಾದ ಮಾರ್ ಇವಾನಿಯೋಸ್ ಅವರ 70ನೇ ಪುಣ್ಯದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನೆಲ್ಯಾಡಿಯ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ತೋಮಸ್ ಬಿಜಿಲಿ ಓ.ಐ.ಸಿ. ಅವರು ಮಾರ್ ಇವಾನಿಯೋಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರೊಂದಿಗೆ ಮೊಂಬತ್ತಿಯನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕೇರಳದ ತಿರುವನಂತಪುರದಲ್ಲಿ ಹುಟ್ಟಿ ಬೆಳೆದು ಮಲಂಕರ ಕೆಥೋಲಿಕ್ ಚರ್ಚ್‍ನ ಆರ್ಚ್ ಬಿಷಫ್ ಸ್ಥಾನವನ್ನು ಅಲಂಕರಿಸಿ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದರೊಂದಿಗೆ ಶ್ರೇಷ್ಠ ಸಮಾಜ ಸುಧಾರಕರಾಗಿ ಉನ್ನತ ಆದರ್ಶ ವ್ಯಕ್ತಿತ್ವವನ್ನು ಹೊಂದಿದ್ದ ಅವರ ಗುಣಗಳನ್ನು ಸ್ಮರಿಸುತ್ತಾ ಮಹಾನ್ ಸಾಧನೆಗಳನ್ನು ಪ್ರಶಂಸಿಸಿದರು. ಇಂತಹ ಶ್ರೇಷ್ಠ ವ್ಯಕ್ತಿಯ ಹೆಸರಿನಲ್ಲಿ ಸ್ಥಾಪನೆಯಾಗಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳೆಲ್ಲರೂ ಅವರ ಆದರ್ಶ ಗುಣಗಳನ್ನು ಅನುಸರಿಸಿಕೊಂಡು ಶಿಕ್ಷಣ ಸೇವೆಯನ್ನು ನೀಡುವ ಕಾರ್ಯವನ್ನು ತಮ್ಮ ಮುಂದಿನ ವೃತ್ತಿ ಜೀವನದಲ್ಲಿ ಮುಂದುವರಿಸಿಕೊಂಡು ಹೋಗುವ ಕುರಿತ ಪ್ರೇರಣಾದಾಯಕವಾದ ಮಾತುಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವ್ಯವಸ್ಥಾಪಕರಾದ ರೆ.ಫಾ.ಡಾ. ಎಲ್ದೋ ಪುತ್ತನ್ ಕಂಡತ್ತಿಲ್ ಅವರು ಮಾರ್ ಇವಾನಿಯೋಸ್ ಅವರ ಜೀವನ, ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಕುರಿತು ಸ್ಮರಿಸಿ ಅವರ ವ್ಯಕ್ತಿತ್ವದ ಆದರ್ಶಗಳನ್ನು ಗುಣಗಾನಗೈದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ವೇತಾ ಪಿ.ಕೆ. ವೇದಿಕೆಯಲ್ಲಿದ್ದು, ಅತಿಥಿಗಳ ಕಿರು ಪರಿಚಯವನ್ನು ನೀಡಿದರು. ಪ್ರಶಿಕ್ಷಣಾರ್ಥಿ ಸಿ.ಜಿನ್ಸಿ ಕೆ.ಜೆ. ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕಿ ವಿನ್ಸಿ ಅಬ್ರಹಾಂ ವಂದಿಸಿದರು. ಪ್ರಶಿಕ್ಷಣಾರ್ಥಿಗಳಾದ ದೀಕ್ಷಾ ಮ್ಯಾಥ್ಯೂ ಮತ್ತು ಪ್ರಿನ್ಸಿ. ಡಿ. ಎಸ್. ಕಾರ್ಯಕ್ರಮ ನಿರೂಪಿಸಿದರು.