(ನ್ಯೂಸ್ ಕಡಬ) newskadaba.com ಬೆಂಗಳೂರು, ಜಿ. 17. ಕಳೆದ ವರ್ಷ ಜಾನುವಾರುಗಳಿಗೆ ಆವರಿಸಿಕೊಂಡಿದ್ದ ಚರ್ಮಗಂಟು ರೋಗದಿಂದ ರೈತರು ಸುಧಾರಿಸುವ ಮುನ್ನವೇ, ಇನ್ನೊಂದು ಒಟೈಟಿಸ್ ಎಂಬ ಮಾರಕ ಕಾಯಿಲೆ ರಾಜ್ಯಕ್ಕೆ ಕಾಲಿಟ್ಟಿದೆ.
ಒಟೈಟಿಸ್ ಎಂಬ ಮಾರಕ ಕಾಯಿಲೆಯು ತಮಿಳುನಾಡು ಭಾಗದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ಈ ಕಾಯಿಲೆ ಬಂದಲ್ಲಿ ಹಸು ಸಾವಿಗೀಡಾಗುವ ಸಾಧ್ಯತೆ ಹೆಚ್ಚಿರುವುದಾಗಿ ತಿಳಿದುಬಂದಿದೆ. ಒಟೈಟಿಸ್ ಕಾಯಿಲೆ ಇದೀಗ ಬೆಂಗಳೂರು ಭಾಗದ ಹೈನುಗಾರರಿಗೆ ತಲೆನೋವಾಗಿ ಪರಿಣಮಿಸಿದ್ದು, ಆನೇಕಲ್ ತಾಲೂಕಿನ ಬಹುತೇಕ ಹಳ್ಳಿಗಳಿಗೆ ಈ ಕಾಯಿಲೆ ಹಬ್ಬಿದೆ. ಅಲ್ಲದೇ ಇಂಡ್ಲವಾಡಿ, ಸುರಗಜಕ್ಕನಹಳ್ಳಿ, ವಣಕನಹಳ್ಳಿ ಹಾಗೂ ದಿನ್ನೂರು ಸೇರಿದಂತೆ ಹಲವೆಡೆ ದನಗಳು ಸಾವಿಗೀಡಾದ ಕುರಿತು ವರದಿಯಾಗಿದೆ.
ಒಟೈಟಿಸ್ ರೋಗ ಲಕ್ಷಣಗಳು:- ಪ್ರಾರಂಭದಲ್ಲಿ ಹಸುವಿನ ಕಿವಿ ಸೋರಲು ಪ್ರಾರಂಭಿಸಿ, ಬಳಿಕ ಅದಕ್ಕೆ ತಲೆ ನೋವು ಕಾಣಿಸಿಕೊಂಡು ಸೊರಗುತ್ತದೆ. ಇದಾದ ಮೇಲೆ ಮೂಗು, ಬಾಯಿ, ಕಿವಿ ಕೂಡ ಸೋರಲು ಪ್ರಾರಂಭವಾಗುತ್ತದೆ. ಈ ಕಾಯಿಲೆಗೆ ನಿರ್ದಿಷ್ಟ ಔಷದ ಸಿಗದೇ ರೈತರು ಪರದಾಡುವ ಸಾಧ್ಯತೆ ಹೆಚ್ಚಿದೆ.
ರೋಗ ಲಕ್ಷಣಗಳು ಕಂಡುಬಂದಲ್ಲಿ ರೈತರು ಎಚ್ಚರ ವಹಿಸಬೇಕಾದ ಕ್ರಮಗಳು-
ಪಶು ವೈದ್ಯರು ಹೇಳುವಂತೆ, ಕಾಯಿಲೆ ಕಾಣಿಸಿಕೊಂಡಾಗ ಹಸುವನ್ನು ಪ್ರತ್ಯೇಕವಾಗಿ ಕಟ್ಟಿಹಾಕಿ ವೈದ್ಯರಿಂದ ನಿರಂತರ ಚಿಕಿತ್ಸೆ ಕೊಡಿಸಬೇಕು. ಹಸುವಿಗೆ ವೈದ್ಯರಿಂದ ಆಂಟಿ ಬಯೋಟೆಕ್ ಮತ್ತು ಐವರ್ ಮೆಕ್ಟೀನ್ ಎಂಬ ಇಂಜೆಕ್ಷನ್ ಕೊಡಿಸಬೇಕು. ಇನ್ನು ಕಾಯಿಲೆಯಿರುವ ಹಸು ತಿಂದ ಆಹಾರವನ್ನು ಇನ್ನೊಂದು ಹಸುವಿಗೆ ನೀಡಬಾರದು. ಇದರಿಂದ ಒಂದು ಹಸುವಿನಿಂದ ಇನ್ನೊಂದು ಹಸುವಿಗೆ ರೋಗ ಹರಡುವುದನ್ನು ತಪ್ಪಿಸಬಹುದು ಎಂದಿದ್ದಾರೆ.