ರಾಜ್ಯಾದ್ಯಂತ ನಾಳೆ(ಜ.28) ಮೊದಲ ಹಂತದ ಪಲ್ಸ್ ಪೊಲೀಯೋ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.27. ರಾಜ್ಯದಲ್ಲಿ ಜನವರಿ 28, 2018 (ಮೊದಲನೇ ಸುತ್ತು) ಮತ್ತು ಮಾರ್ಚ್ 11, 2018 (ಎರಡನೇ ಸುತ್ತು) ರಂದು ಎರಡು ಹಂತದಲ್ಲಿ ನಡೆಯುವ ರಾಷ್ಟ್ರೀಯ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮದಲ್ಲಿ 0-5 ವಯೋಮಿತಿಯ ಯಾವುದೇ ಮಗು ಲಸಿಕೆಯಿಂದ ಹೊರಗುಳಿಯದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಕೆ. ರತ್ನಪ್ರಭಾ ಅವರು ಸೂಚಿಸಿದರು.

2018 ರ ರಾಷ್ಟ್ರೀಯ ಲಸಿಕಾ ದಿನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ವಿಧಾನಸೌಧದಲ್ಲಿ ಇಂದು ಕರೆಯಲಾಗಿದ್ದ ರಾಜ್ಯ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳ ತಾಲ್ಲೂಕು ಮತ್ತು ಹೋಬಳಿವಾರು 0-5 ವರ್ಷದ ಮಕ್ಕಳಿಗೆ ನೀಡಲಾಗಿರುವ ಪೊಲೀಯೋ ಲಸಿಕೆಯ ಅಂಕಿ ಅಂಶವನ್ನು ಪಡೆದು ಲಸಿಕೆಯಿಂದ ಹೊರಗುಳಿದಿರುವ ಮಕ್ಕಳ ವಿವರವನ್ನು ಮತ್ತು ಆಸ್ಪತ್ರೆಗಳಲ್ಲಿ ಘಟಿಸುವ ಜನನ ಪ್ರಕರಣಗಳ ಅಂಕಿ ಅಂಶಗಳನ್ನು ಪಡೆದು ಪೊಲೀಯೋ ಲಸಿಕಾ ಕಾರ್ಯದಲ್ಲಿ ಕಾರ್ಯೋನ್ಮುಖರಾಗುವಂತೆ ಸೂಚಿಸಿದರು. ಬೆಂಗಳೂರು ನಗರ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬಳ್ಳಾರಿ, ವಿಜಯಪುರ, ರಾಯಚೂರು, ಬಾಗಲಕೋಟೆ ಜಿಲ್ಲೆಗಳನ್ನು ಪೊಲೀಯೋ ಸೂಕ್ಷ್ಮ ಪ್ರದೇಶ ಜಿಲ್ಲೆಗಳೆಂದು ಗುರುತಿಸಲಾಗಿದ್ದು, ಈ ಭಾಗಗಳಲ್ಲಿ ಪೊಲೀಯೋ ಲಸಿಕಾ ಕಾರ್ಯಕ್ರಮದ ಅರಿವು ಮೂಡಿಸುವ ಪ್ರಚಾರ ಕಾರ್ಯಕ್ರಮವನ್ನು ವ್ಯಾಪಕವಾಗಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಈ ಜಿಲ್ಲೆಗಳಿಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮುತುವರ್ಜಿವಹಿಸಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.

Also Read  ವಾಮದಪದವು: "ಬಲೆ ತುಳು ಲಿಪಿ ಕಲ್ಪುಗ" ಕಾರ್ಯಾಗಾರ ಉದ್ಘಾಟನೆ

ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲದಂತಹ ಮತ್ತು ಅನಕ್ಷರಸ್ಥ ಪೋಷಕರು, ಬುಡಕಟ್ಟು ಜನಾಂಗದವರನ್ನು ಗುರಿಯನ್ನಾಗಿರಿಸಿ ಅವರಿಗೆ ಪೊಲೀಯೋ ಬಗ್ಗೆ ತಿಳುವಳಿಕೆ ಮೂಡಿಸುವುದು ಹಾಗೂ ಕಟ್ಟಡ ಕಾರ್ಮಿಕರು, ಇತರೆ ಜಿಲ್ಲೆಗಳಿಂದ ವಲಸೆ ಬಂದಿರುವಂತಹ ವಲಸಿಗರು, ವಸತಿ ಸಮುಚ್ಚಯಗಳಲ್ಲಿ ಹೆಚ್ಚಿನ ಪ್ರಚಾರ ಮತ್ತು ತಿಳುವಳಿಕೆ ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಅವರು ತಿಳಿಸಿದರು. ರಾಜ್ಯ ಮಟ್ಟದ ಚಾಲನಾ ಸಮಿತಿಯ ರೀತಿಯಲ್ಲಿಯೇ ಜಿಲ್ಲಾ ಮಟ್ಟದಲ್ಲಿಯೂ ಸಹ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮದ ಬಗ್ಗ ಸಭೆಗಳನ್ನು ನಡೆಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿಗಳು ತಿಳಿಸಿದರು. ಸಭೆಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್, ಸಾರ್ವಜನಿಕ ಶಿಕ್ಷಣ ಇಲಾಖೆ(ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ) ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಉಮಾ ಮಹದೇವನ್, ರಾಷ್ಟ್ರೀಯ ಆರೋಗ್ಯ ಅಭಿಯಾನ ವ್ಯವಸ್ಥಾಪಕ ನಿರ್ದೇಶಕ ರತನ್ ಖೇಲ್ಕರ್ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಹರ್ಷ ಪಿ.ಎಸ್. ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

Also Read  ಕಡಬ: ತಾಲೂಕು ಪಂಚಾಯತ್ ಸಾಮಾನ್ಯ ಸಭೆ

error: Content is protected !!
Scroll to Top