(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 15. ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪೂರೈಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ.
ಮೊಟ್ಟೆ ವಿಚಾರವಾಗಿ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ನಾಯಕ ನಾರಾಯಣಸ್ವಾಮಿ ಪ್ರಸ್ತಾಪಿಸಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಮೊಟ್ಟೆ ಪೂರೈಕೆಯಾಗುತ್ತಿದೆ. ಇದೊಂದು ದೊಡ್ಡ ಮಾಫಿಯಾ ಆಗಿ ಬೆಳೆದಿದ್ದು, ಅದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಕೂಡಲೇ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.
ಇದಕ್ಕೆ ಉತ್ತರ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ 67,570 ಅಂಗನವಾಡಿ ಕೇಂದ್ರಗಳು ಮತ್ತು 2,329 ಮಿನಿ ಅಂಗನವಾಡಿ ಕೇಂದ್ರಗಳು ಸೇರಿ ಒಟ್ಟು 69,899 ಅಂಗನವಾಡಿ ಕೇಂದ್ರಗಳಿವೆ. ಇಲ್ಲಿ 39,50,179 ಮಕ್ಕಳು ದಾಖಲಾಗಿ ಸೌಲಭ್ಯ ಪಡೆಯುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿರುವ ಆಹಾರ ಪದಾರ್ಥ ಕಳಪೆ ಗುಣಮಟ್ಟ ಆಗಿರೋದು ಗಮನಕ್ಕೆ ಬಂದಿದೆ. ಈ ರೀತಿ ಕಳಪೆ ಮೊಟ್ಟೆ ಪೂರೈಕೆ ಮಾಡುತ್ತಿರುವವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಅಲ್ಲದೇ, ಕಳಪೆ ಮೊಟ್ಟೆ ಪೂರೈಕೆಯನ್ನು ನಿಗ್ರಹಿಸಲು ವಿಶೇಷ ಟಾಸ್ಕ್ ಫೋರ್ಸ್ ನ್ನು ರಚಿಸಲಾಗುವುದು ಎಂದು ಹೇಳಿದರು.