(ನ್ಯೂಸ್ ಕಡಬ) newskadaba.com ಕಡಬ, ಜ.27. ಜಾತಿ ನಿಂದನೆ ಆರೋಪದಲ್ಲಿ ಬಂಧಿತನಾಗಿದ್ದ ಕಡಬ ತಾಲೂಕಿನ ಬಲ್ಯ ಗ್ರಾಮದ ಪುತ್ತಿಲ ನಿವಾಸಿ ನಾಟಿ ವೈದ್ಯ ಅನುರಾಧ ಗೌಡರಿಗೆ ಶನಿವಾರದಂದು ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಆಲಂಕಾರು ಗ್ರಾಮದ ಕೇಪುಳು ನಿವಾಸಿ ರಾಘವ ಎಂಬವರು ಕಳೆದ ಮಂಗಳವಾರ ಸೊಂಟ ನೋವಿನ ಸಮಸ್ಯೆಗೆ ಮಸಾಜ್ ಮಾಡಿಸಲು ಹೋದ ಸಂದರ್ಭದಲ್ಲಿ ಅನುರಾಧ ಗೌಡರು ತಮ್ಮ ಮನೆಯೊಳಗೆ ಪ್ರವೇಶಿಸುವುದನ್ನು ತಡೆದು ನೀನು ಯಾವ ಜಾತಿಯವನು ಎಂದು ಕೇಳಿ ಅಪಹಾಸ್ಯ ಮಾಡಿ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿರುವುದಾಗಿ ಕಡಬ ಠಾಣೆಗೆ ದೂರು ನೀಡಲಾಗಿತ್ತು. ಪೋಲೀಸರು ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ಫೆಬ್ರವರಿ 8 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆರೋಪಿ ಪರ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಶನಿವಾರದಂದು ಜಾಮೀನು ಮಂಜೂರು ಮಾಡಿದೆ.










