(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 14. ಯಾವುದೇ ದಾಖಲೆಗಳಿಲ್ಲದೇ ಸಣ್ಣ ಮೊತ್ತದ ಸಾಲ ನೀಡಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಮೊಬೈಲ್ ಅಪ್ಲಿಕೇಶನ್ ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಇಂತಹ ಆರೋಪಕ್ಕೆ ಸಂಬಂಧಿಸಿದ 42 ಮೊಬೈಲ್ ಆಪ್ ಸೇವೆಗಳನ್ನು ರಾಜ್ಯ ಸರ್ಕಾರ ರದ್ದುಪಡಿಸಿ ಆಪ್ ಗಳನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಕಳಚಿ ಹಾಕಿದೆ. ಈ ಕುರಿತು ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಸಚಿವ ದಿನೇಶ್ ಗುಂಡೂರಾವ್, ಇಂತಹ ಮೊಬೈಲ್ ಆಪ್‌ಗಳನ್ನು ತಡೆಹಿಡಿಯಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಭರವಸೆ ನೀಡಿದರು. ಇದೇ ವೇಳೆ ಗೇಮಿಂಗ್ ಆಪ್ ಬಗ್ಗೆಯೂ ಸೆಲೆಬ್ರಿಟಿಗಳು ಪ್ರಚಾರ ನೀಡುತ್ತಿರುವುದು ಕಳವಳಕಾರಿ. ಇದನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.
ಈಗಾಗಲೇ ಯುವಜನರು ಸುಲಭದ ಸಾಲಕ್ಕೆ ಮರುಳಾಗಿ ಆಪ್‌ಗಳಿಂದ ಸಾಲ ಪಡೆಯುವ ಮೂಲಕ ಅದರ ವಿಷ ವರ್ತುಲಕ್ಕೆ ಸಿಲುಕಿ, ಬಳಿಕ ಅತಿಯಾದ ಬಡ್ಡಿ ಹಾಗೂ ಅಸಲು ಹಿಂತಿರುಗಿಸಲಾಗದೆ ಸಮಸ್ಯೆಗೆ ಸಿಕ್ಕಿ ಹಾಕಿ ಕೊನೆಗೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ಇತ್ತೀಚೆಗಷ್ಟೇ ರಾಜ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಇದೇ ರೀತಿ ಸಾಲ ಪಡೆದು ಬಳಿಕ ಸಾಲ ತೀರಿಸಲಾಗದೇ ಆಪ್ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಇಂತಹ 800ಕ್ಕೂ ಅಧಿಕ ಆಪ್‌ಗಳು ಚಾಲ್ತಿಯಲ್ಲಿದ್ದರೂ ಅದನ್ನು ನಿಯಂತ್ರಿಸಬೇಕಾಗಿರುವುದು ಕೇಂದ್ರ ಸರ್ಕಾರ. ಈ ಹಿನ್ನೆಲೆ ಕೇಂದ್ರದ ಜೊತೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.