(ನ್ಯೂಸ್ ಕಡಬ) newskadaba.com ಕಡಬ, ಜು. 14. ಶಾಲಾ ವಿದ್ಯಾರ್ಥಿ ಸರಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನೆ ಮತ್ತು ಪ್ರಮಾಣವಚನ ಕಾರ್ಯಕ್ರಮವು ಇಲ್ಲಿನ ಸರಸ್ವತೀ ವಿದ್ಯಾಲಯ ಹನುಮಾನ್ ನಗರ ಕೇವಳದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಸುಂದರ ಗೌಡ ಪಣೆಮಜಲು ದೀಪ ಬೆಳಗಿಸಿ ಉದ್ಘಾಟಿಸಿ ಸಂಘಟನೆಯಿಂದ ಒಗ್ಗಟ್ಟು ಬರುತ್ತದೆ, ಒಗ್ಗಟ್ಟಾಗಿ ಕೆಲಸ ಮಾಡುವುದರಿಂದ ಸಂಸ್ಥೆಯ ಪ್ರಗತಿಗೆ ಸಹಕಾರಿಯಾಗುತ್ತದೆ. ಉತ್ತಮ ಸಂಘಟನೆಗೆ ಶಿಸ್ತು ಮತ್ತು ಸಂಸ್ಕಾರ ಅಗತ್ಯ. ವಿದ್ಯಾರ್ಥಿಗಳು ಈ ಮೂಲಕ ಉತ್ತಮ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ಶುಭಹಾರೈಸಿದರು.
ವಿದ್ಯಾರ್ಥಿ ಸರಕಾರದಲ್ಲಿ ಪ್ರೌಢವಿಭಾಗದ ನಾಯಕನಾಗಿ 10ನೇ ತರಗತಿಯ ಪುನೀತ್ ಹಾಗೂ ಉಪನಾಯಕನಾಗಿ 9ನೇ ತರಗತಿಯ ಮೋಕ್ಷಿತ್ ಬಿ ಆಯ್ಕೆಯಾದರು. ಸರಸ್ವತೀ ಆಂಗ್ಲಮಾಧ್ಯಮ ವಿಭಾಗದ ನಾಯಕಿಯಾಗಿ ಜಾನ್ವಿ 8ನೇ ತರಗತಿ ಮತ್ತು ಉಪನಾಯಕನಾಗಿ ಚಂದ್ರಮೌಳಿ ಬಿ 7ನೇ ತರಗತಿ ಆಯ್ಕೆಯಾದರು. ಆಯ್ಕೆಯಾದ ಪ್ರತಿನಿಧಿಗಳನ್ನು ಅತಿಥಿಗಳು ಶಾಲು ಹಾಕಿ ಗೌರವಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ರವಿರಾಜ್ ಶೆಟ್ಟಿ ಕಡಬ ವಹಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀ ವೆಂಕಟ್ರಮಣ ರಾವ್ ಮಂಕುಡೆ, ಸರಸ್ವತೀ ವಿದ್ಯಾಲಯ ಪ್ರೌಢ ವಿಭಾಗದ ಮುಖ್ಯಗುರುಗಳಾದ ಶ್ರೀಮತಿ ಶೈಲಶ್ರೀ ರೈ ಎಸ್, ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳು ಶ್ರೀಮತಿ ಭವ್ಯಶ್ರೀ ಕೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಲಕ್ಷ್ಮೀಶ ಗೌಡ ಆರಿಗ ಉಪಸ್ಥಿತರಿದ್ದರು.
ಸರಸ್ವತೀ ಆಂಗ್ಲಮಾಧ್ಯಮ ಶಾಲೆಯ ನಿಧಿ ಕೆ 8ನೇ ತರಗತಿ ಸ್ವಾಗತಿಸಿ, ಪ್ರೌಢವಿಭಾಗದ ಚೇತನ್ ಕೆ 10ನೇ ತರಗತಿ ವಂದಿಸಿದರು. ಶ್ರೀ ಲಕ್ಷ್ಮೀಶ ಗೌಡ ಆರಿಗ ಪ್ರಮಾಣವಚನ ಬೋಧಿಸಿ ಮಧುರಾ ರೈ 10ನೇ ತರಗತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಸೌಮ್ಯ ಕೆ ಎ ಸಹಕರಿಸಿದರು.