(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 13. ಇದುವರೆಗೆ ಜನನ ಹಾಗೂ ಮರಣ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಕೆಲವು ಇಲಾಖೆಯಲ್ಲಿ ಮಾತ್ರ ನೀಡಲಾಗುತ್ತಿತ್ತು. ಆದರೆ ಇದೀಗ ಕರ್ನಾಟಕ ಸರ್ಕಾರವು ಆಯಾ ಗ್ರಾಮ ಪಂಚಾಯತ್ ಗಳಲ್ಲೇ ಜನನ ಮತ್ತು ಮರಣ ನೋಂದಣಿ ಪ್ರಮಾಣ ಪತ್ರಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಿ ಆದೇಶ ಹೊರಡಿಸಿದೆ. ಇದಕ್ಕೆ ಸಂಬಂಧಿಸಿ ಕಂದಾಯ ಇಲಾಖೆ ಒಂದೂವರೆ ವರ್ಷದ ಹಿಂದೆಯೇ ಆದೇಶ ಹೊರಡಿಸಿತ್ತಾದರೂ, ವರ್ಷಗಳ ನಂತರ ಇದೀಗ ಬೆಳವಣಿಗೆ ಕಂಡಿದೆ.
ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯಬಹುದು ಎಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿ ಒಂದೂವರೆ ವರ್ಷದ ನಂತ್ರ, ಈ ಬೆಳವಣಿಗೆ ನಡೆದಿದೆ.
ಇನ್ನೂ ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ಧತಿ ಬಲಪಡಿಸಲು ಹಾಗೂ ಸಂಭವಿಸುವ ಶೇ.100ರಷ್ಟು ಜನನ, ಮರಣ ನೋಂದಣಿ ಘಟನೆಗಳನ್ನು ದಾಖಲಿಸಲು ಜನನ, ಮರಣ ನೋಂದಣಿ ಅಧಿನಿಯಮ 1969ರ ಪ್ರಕರಣ 7(5)ರನ್ವಯ ಜನನ, ಮರಣ ಘಟಿಸಿದ ಮೂವತ್ತು ದಿನಗಳವರೆಗೆ ನೋಂದಾಯಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇದಲ್ಲದೇ ಪ್ರಕರಣ 7(1)ರ ಅನ್ವಯ ಜನನ, ಮರಣ ಘಟನೆಗಳು ಸಂಭವಿಸಿದ 30 ದಿನಗಳ ನಂತರದ ವಿಳಂಬ ನೋಂದಣಿಯಡಿ ನೋಂದಾಯಿಸಲು ಗ್ರಾಮ ಲೆಕ್ಕಾಧಿಕಾರಿಗಳನ್ನು ನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಹೊರಡಿಸಿರುವಂತ ಸುತ್ತೋಲೆಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ, ಆದೇಶ ಪಡೆದು ನಿಗದಿಪಡಿಸಿದ ವಿಳಂಬ ಶುಲ್ಕದೊಂದಿಗೆ ನೋಂದಾಯಿಸಲು ಆದೇಶಿಸಲಾಗಿದೆ. ಈ ಆದೇಶವು ಪ್ರಾಮಾಣಿತ ಕಾರ್ಯಾಚರಣೆ ವಿಧಾನಗಳನ್ನು ಹೊರಡಿಸಿದ ನಂತ್ರ ಜಾರಿಗೆ ಬರುತ್ತದೆ ಎಂದು ತಿಳಿಸಿದೆ.