(ನ್ಯೂಸ್ ಕಡಬ) newskadaba.com ಮಂಗಳೂರು, ಜು.13. ರಾಜ್ಯದ ಎಲ್ಲಾ ಮಹಿಳೆಯರಿಗೆ (ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಮತ್ತು ತೃತೀಯ ಲಿಂಗಿಗಳು ಒಳಗೊಂಡಿರುವಂತೆ) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ, ಸಾಮಾನ್ಯ ಸಾರಿಗೆ ಹಾಗೂ ವೇಗದೂತ ಬಸ್ಸುಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಕಲ್ಪಿಸಿದೆ. ಜೂನ್11ರಿಂದ ಶಕ್ತಿ ಯೋಜನೆ ಜಾರಿಯಾಗಿರುತ್ತದೆ.
ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ಆಧಾರ್ ಕಾರ್ಡ್, ಚುನಾವಣಾ ಆಯೋಗ ವಿತರಿಸಿರುವ ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಿಗೆ ಪತ್ರ, ವಾಸಸ್ಥಳ ನಮೂದಿಸಿರುವಂತಹ ಕರ್ನಾಟಕ ಸರ್ಕಾರದ ಇಲಾಖೆಗಳು/ಕರ್ನಾಟಕ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ/ಸಂಸ್ಥೆಗಳು ವಿತರಿಸಿರುವ ಗುರುತಿನ ಚೀಟಿ ಅಥವಾ ಕರ್ನಾಟಕ ಸರ್ಕಾರದ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದು ದಾಖಲಾತಿಯನ್ನು ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರು ತಮ್ಮ ಪ್ರಯಾಣ ಸಂದರ್ಭದಲ್ಲಿ ಗುರುತಿನ ಚೀಟಿಯ ಮೂಲ, ನಕಲು, ಡಿಜಿಲಾಕರ್(ಹಾರ್ಡ್ ಮತ್ತು ಸಾಪ್ಟ್ ಪ್ರತಿ) ಮಾದರಿಯಲ್ಲಿ ಹಾಜರುಪಡಿಸಿ ಪ್ರಯಾಣಿಸಬಹುದು.
ಪ್ರಸ್ತುತ ನಿಗಮದ ವಾಹನಗಳಲ್ಲಿ ಕೆಲವು ಮಹಿಳಾ ಪ್ರಯಾಣಿಕರು ಗುರುತಿನ ಚೀಟಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ತೋರಿಸದೆ ಪ್ರಯಾಣಿಸುತ್ತಿರುವುದರಿಂದ ನಿರ್ವಾಹಕರ ಮತ್ತು ಪ್ರಯಾಣಿಕರ ಮಧ್ಯದಲ್ಲಿ ವಾಗ್ವಾದಗಳಾಗಿ ದೂರುಗಳು ಬರಲು ಪ್ರಾರಂಭವಾಗಿರುತ್ತದೆ. ಆದುದರಿಂದ ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರು ತಮ್ಮ ಪ್ರಯಾಣದ ಸಂದರ್ಭದಲ್ಲಿ ನಿಗದಿಪಡಿಸಲಾದ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಪ್ರಯಾಣಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದು ಕರಾರಸಾ ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.