ಕಡಬ: ಜಿಲ್ಲಾಧಿಕಾರಿ ಭೇಟಿ; ಇಲಾಖಾಧಿಕಾರಿಗಳ ಸಭೆ | ಪ್ರಾಕೃತಿಕ ವಿಕೋಪ ತಡೆಗೆ ಗ್ರಾಮ ಮಟ್ಟದಲ್ಲೇ ತಯಾರಿ ನಡೆಸಿ- ಮುಲ್ಲೈ ಮುಗಿಲನ್

(ನ್ಯೂಸ್ ಕಡಬ) newskadaba.com ಕಡಬ, ಜು. 13. ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ರವರು ಬುಧವಾರದಂದು ಕಡಬ ತಾಲೂಕು ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಇಲಾಖಾಧಿಕಾರಿಗಳ ಜೊತೆ ಪ್ರಾಕೃತಿಕ ವಿಕೋಪಗಳ ಮುಂಜಾಗ್ರತಾ ಕ್ರಮಗಳ ಕುರಿತು ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನೆರೆಪೀಡಿತ ಪ್ರದೇಶಗಳನ್ನು ಗುರುತಿಸಿಕೊಂಡು ಅಲ್ಲಿ ಸಮಸ್ಯೆಗಳು ಉದ್ಭವವಾಗದಂತೆ ಮುನ್ನೆಚ್ಚರಿಕೆ ವಹಿಸುವ ಕಾರ್ಯ ಗ್ರಾಮ ಮಟ್ಟದಿಂದಲೇ ಆಗಬೇಕು. ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿಗಳು ಪ್ರಾಕೃತಿಕ ವಿಕೋಪ ಸಂಭವಿಸಬಹುದಾದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಮುಂದೆ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲಿ ಏನು ಅವಶ್ಯಕತೆ ಇದೆಯೋ ಅಲ್ಲಿ ನಾಡ ದೋಣಿಗಳು, ಜೆಸಿಬಿ, ಹಿಟಾಚಿಗಳು ಅಥವಾ ಇನ್ನಿತರ ಮುಳುಗು ತಜ್ಞರು ಹಾಗೂ ಸ್ಥಳೀಯವಾಗಿ ದೊರೆಯುವ ಸಮಾಜ ಸೇವಕರನ್ನು ಬಳಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಯಾವುದೇ ಸಮಸ್ಯೆ ಬಂದಾಗ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಕಂಟ್ರೋಲ್ ರೂಂ.ಗೆ ಮಾಹಿತಿ ರವಾನೆ ಮಾಡಬೇಕು. ಮೊಬೈಲ್ ನೆಟ್‌ ವರ್ಕ್ ಸಿಗದ ಪ್ರದೇಶಗಳನ್ನು ಗುರುತಿಸಿ ಅಲ್ಲಿಗೆ ಸಂಪರ್ಕ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಪರಿಹಾರ ಕ್ರಮಗಳಿಗೆ ಹಣಕಾಸಿನ ತೊಂದರೆಯಾಗದಂತೆ ಮುನ್ನಚ್ಚರಿಕೆ ವಹಿಸಬೇಕು, ಸಮಸ್ಯೆ ಬಂದ ನಂತರ ಪರಿತಪಿಸುವುದಕ್ಕಿಂತ ಸಮಸ್ಯೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಮೊದಲೇ ಸರ್ವ ಸನ್ನದ್ದರಾಗಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು. ಸಮಸ್ಯೆ ಆಗುವ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು, ಯಾವುದೇ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು, ಯಾವುದೇ ಲೋಪಬಾರದಂತೆ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಾವು ನಡೆಸುವ ಸಭೆ ಕೇವಲ ಕಾಟಾಚಾರವಾಗಬಾರದು, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

ಮಳೆ, ಗಾಳಿ ಸಂದರ್ಭದಲ್ಲಿ ವಿದ್ಯುತ್ ಲೈನ್‌ಗಳಿಗೆ ಹಾನಿಯಾದಲ್ಲಿ ಕೂಡಲೇ ಮೆಸ್ಕಾಂನವರು ಮುಂಜಾಗ್ರತೆ ವಹಿಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾದಲ್ಲಿ ತೆರವು ಕಾರ್ಯಕ್ಕೂ ಸಂಬಂಧಿಸಿದ ಇಲಾಖೆ ಸಿದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ನೋಡೆಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಉಂಟಾಗಬಹುದಾದ ಸಮಸ್ಯೆಯನ್ನು ಎದುರಿಸಬೇಕಾಗುವ ಬಗ್ಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಿ. ಸಮಸ್ಯೆ ಉಂಟಾದಲ್ಲಿ ಕೂಡಲೇ ಸ್ಪಂದಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತೆ ವಹಿಸಿ, ಗ್ರಾ.ಪಂ. ಪಿಡಿಒಗಳು ನೋಡೆಲ್ ಅಧಿಕಾರಿಗಳಿಗೆ ಪೂರಕ ಮಾಹಿತಿ ನೀಡುವಂತೆ ಸೂಚಿಸಿದರು.


ಕೊಂಬಾರು ಗ್ರಾಮದಲ್ಲಿ ಘನತಾಜ್ಯ ವಿಲೇವಾರಿ ಘಟಕಕ್ಕೆ ಸಂಬಂಧಿಸಿದ ಜಾಗ ಅರಣ್ಯ ಇಲಾಖೆಯ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯೊಳಗೆ ಇದೆ. ಇದಕ್ಕೆ ಅರಣ್ಯ ಇಲಾಖೆಯಿಂದ ತಕರಾರು ಇದೆ ಎಂದು ಕೊಂಬಾರು ಗ್ರಾ.ಪಂ.ಪಿಡಿಓ ರಾಘವೇಂದ್ರ ಗೌಡರವರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕಡಬ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಘನತಾಜ್ಯ ಘಟಕ, ಸ್ಮಶಾನಕ್ಕೆ ಸಂಬಂಧಿಸಿದ ಜಾಗದ ಸಮಸ್ಯೆ ಇದ್ದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಸೂಚಿಸಿದರು.


ಪ್ರೊಬೆಷನರಿ ಜಿಲ್ಲಾಧಿಕಾರಿ ಮುಕುಲ್ ಜೈನ್, ಪುತ್ತೂರು ಸಹಾಯಕ ಆಯುಕ್ತ ಮಹೇಶ್ಚಂದ್ರ, ಕಡಬ ತಹಶೀಲ್ದಾರ್ ರಮೇಶ್ ಬಾಬು, ಉಪ ತಹಶೀಲ್ದಾರ್‌ಗಳಾದ ಗೋಪಾಲ್ ಕಲ್ಲುಗುಡ್ಡೆ, ಮನೋಹರ ಕೆ.ಟಿ, ಲೊಕೋಪಯೋಗಿ ಇಲಾಖೆ ಎಇಇ ರಾಜಾರಾಮ್, ಜಿ.ಪಂ. ಎಇಇ ಭರತ್ ಬಿ.ಎಂ., ಇಂಜಿನಿಯರ್ ಸಂಗಪ್ಪ ಹುಕ್ಕೇರಿ, ತಾಲೂಕು ಆರೋಗ್ಯಾಧಿಕಾರಿ ಡಾ|ದೀಪಕ್ ರೈ, ಕಡಬ ಮೆಸ್ಕಾಂ ಎಇಇ ಸಜಿಕುಮಾರ್, ಸುಬ್ರಹ್ಮಣ್ಯ ಎಇಇ ವಸಂತ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಪಶು ವೈದ್ಯಾಧಿಕಾರಿ ಡಾ| ಮಲ್ಲಿಕಾ, ಕಂದಾಯ ನಿರೀಕ್ಷಕ ಪೃಥ್ವಿರಾಜ್, ತಾ.ಪಂ. ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ಭೂಮಾಪನಾ ಇಲಾಖೆಯ ಸೂಪರ್ ವೈಸರ್ ಚಂದ್ರಶೇಖರ ಮೂರ್ತಿ, ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ತೋಟಗಾರಿಕಾ ಇಲಾಖಾಧಿಕಾರಿ ರೇಖಾ, ಕೃಷಿ ಅಧಿಕಾರಿ ಟಿ.ಎನ್.ಭರಮಣ್ಣನವರ್, ಕಡಬ ಎಸ್‌ಐ ಆಂಜನೇಯ ರೆಡ್ಡಿ, ಸಿ.ಡಿಪಿಒ ಶ್ರೀಲತಾ, ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಫಕೀರ ಮೂಲ್ಯ ಮೊದಲಾದವರು ಭಾಗವಹಿಸಿದ್ದರು.

error: Content is protected !!

Join the Group

Join WhatsApp Group