(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 12. ರಾಜ್ಯದಲ್ಲಿ ಮುಂಗಾರು ಮಳೆಯ ಆಗಮನದಲ್ಲಿ ಸ್ವಲ್ಪ ತಡವಾಗಿತ್ತು. ಆದರೂ ಕಳೆದ ವಾರದಲ್ಲಿ ನಿರಂತರವಾಗಿ ಸುರಿದ ಮಳೆಗೆ ನೆರೆ ಪ್ರವಾಹ ಉಂಟಾಗಿ ಜನ ತತ್ತರಿಸಿ ಹೋಗಿದ್ದಾರೆ. ಒಂದೆಡೆ ಮಳೆಯ ಆಗಮನದಿಂದ ರೈತರು ಸಂತಸಗೊಂಡಿದ್ದರೆ, ಇನ್ನೊಂದೆಡೆ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಮುಂದಿನ 4 ದಿನಗಳವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಸೂಚನೆಯ ಪ್ರಕಾರ, ದಕ್ಷಿಣಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಅತಿಯಾದ ಮಳೆಯಿಂದ ಉಂಟಾಗುವ ತೊಂದರೆಗಳ ಬಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಈಗಾಗಲೇ ನೆರೆ ಪ್ರವಾಹದಿಂದ ಹಳ್ಳ ಕೊಳ್ಳ, ನದಿಗಳು ತುಂಬಿ ಪ್ರಾಣ ಹಾನಿ ಕೂಡ ಸಂಭವಿಸಿದೆ.
ಕಳೆದೆರಡು ದಿನಗಳಿಂದ ದ.ಕ ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆರಾಯ ಬಿಡುವು ಕೊಟ್ಟಿದೆ. ಆದರೆ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಸೇರಿದಂತೆ ಕರಾವಳಿ ಹಾಗೂ ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಮದು ಸೂಚಿಸಿದೆ.