(ನ್ಯೂಸ್ ಕಡಬ) newskadaba.com ಸುಳ್ಯ, ಜು. 12. ಸಂಪಾಜೆ ವಲಯದ ಡಬ್ಬಡ್ಕ ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ನಾಶದಂಚಿನಲ್ಲಿರುವ ಮಲಬಾರ್ ದೈತ್ಯ ಅಳಿಲು ಹಾಗೂ ಹಾರುವ ಅಳಿಲುಗಳನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಂಪಾಜೆ ವಲಯ ಅರಣ್ಯ ಇಲಾಖೆ ಆಧಿಕಾರಿಗಳು ದಾಳಿ ನಡೆಸಿದ ಘಟನೆ ವರದಿಯಾಗಿದೆ.
ವನ್ಯ ಜೀವಿಗಳನ್ನು ಬೇಟೆಯಾಡಿರುವ ಬಗ್ಗೆ ಸಂಪಾಜೆ ವಲಯ ಅರಣ್ಯ ಇಲಾಖೆಗೆ ಲಭಿಸಿದ ಖಚಿತ ಮಾಹಿತಿಯ ಪ್ರಕಾರ ಆರೋಪಿಗಳಾದ ದಬ್ಬಡ್ಕ ಗ್ರಾಮದ ಮದನ್ ಕುಮಾರ್, ಗಣಪತಿ ಬಿನ್ ಮಾಚಯ್ಯ ಹಾಗೂ ಪ್ರಸನ್ನ ಕುಮಾರ್ ಎಂಬವರ ಮನೆಗೆ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭ ಮೂವರು ಆರೋಪಿಗಳು ಪರಾರಿಯಾಗಿದ್ದು, ಮನೆಯಲ್ಲಿದ್ದ 2 ವನ್ಯಜೀವಿಗಳ ಮಾಂಸವನ್ನು ಪಾತ್ರೆ ಸಹಿತ ಕೋವಿಯನ್ನು ಕೂಡಾ ವಶಪಡಿಸಿರುವುದಾಗಿ ತಿಳಿದುಬಂದಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.