(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜುಲೈ, 11. ದೈವದ ಜಾಗದ ವಿಚಾರದಲ್ಲಿ ಗಲಾಟೆ ನಡೆದು ವ್ಯಕ್ತಿಯೋರ್ವ ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಬಾಡಾರು ಎಂಬಲ್ಲಿ ನಡೆದಿದೆ.
ಬಾಡಾರಿನ ಕೊರಗಕಲ್ಲು ಎಂಬಲ್ಲಿ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಗುಡಿಯ ವಿಚಾರವಾಗಿ ಗಲಾಟೆ ನಡೆದು, ಬಳಿಕ ಅದು ತಾರಕಕ್ಕೇರಿ ಗುಡಿಯ ಬದಿಯಲ್ಲಿರುವ ನಿವಾಸಿ ಈ ರೀತಿಯ ವಿಕೃತಿ ಮೆರೆದಿದ್ದಾನೆ ಎನ್ನಲಾಗಿದೆ. ಇಲ್ಲಿನ ಸಾರ್ವಜನಿಕರು ಸ್ವಾಮಿ ಕೊರಗಜ್ಜ ಸಮಿತಿಯನ್ನು ರಚಿಸಿ ವರ್ಷಂಪ್ರತಿ ಕೊರಗಜ್ಜನಿಗೆ ಕೋಲ, ಅಗೇಲು ನೀಡಿ ಆರಾಧನೆ ಮಾಡುತ್ತಿದ್ದರು. ಆದರೆ ಕೊರಗಜ್ಜನ ಗುಡಿಯಿರುವ ಸ್ಥಳದ ಬಗ್ಗೆ ಸ್ಥಳೀಯ ವ್ಯಕ್ತಿ ಅದು ತನ್ನ ಜಾಗವೆಂದು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ, ಆತ ಅದೇ ಸ್ಥಳದಲ್ಲಿ ಮತ್ತೊಂದು ಕೊರಗಜ್ಜನ ಗುಡಿ ಕಟ್ಟಲು ವ್ಯವಸ್ಥೆ ಮಾಡಿದ್ದನು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಮಿತಿಯವರು ಪೊಲೀಸ್ ದೂರು ದಾಖಲಿಸಿದ್ದರು. ಇದರಿಂದ ಕೋಪಗೊಂಡ ವ್ಯಕ್ತಿ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೊರಗಜ್ಜನ ಗುಡಿಗೆ ಬೆಂಕಿಯಿಟ್ಟು ವಿಕೃತಿ ಮೆರೆದಿದ್ದಾನೆ. ಈ ಕುರಿತು ಸ್ವಾಮಿ ಕೊರಗಜ್ಜ ಸಮಿತಿಯು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದೆನ್ನಲಾಗಿದೆ.