ಜೈನಮುನಿಗಳ ಭದ್ರತೆಗೆ ಸರಕಾರ ಸಿದ್ದ- ಶೀಘ್ರ ಸುತ್ತೋಲೆ- ಸಚಿವ ಜಿ.ಪರಮೇಶ್ವರ್

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಜು. 10. ಧರ್ಮ ಪ್ರಚಾರಕ್ಕಾಗಿ ಜೈನ ಮುನಿಗಳು ವಿಹಾರ ನಡೆಸುವ ಸಂದರ್ಭದಲ್ಲಿ ಪೊಲೀಸ್ ಭದ್ರತೆ ಒದಗಿಸಲು ಸರ್ಕಾರ ಸಿದ್ಧವಿದ್ದು, ಪೊಲೀಸ್‌ ಇಲಾಖೆಯಿಂದ ಎಲ್ಲಾ ಠಾಣೆಗಳಿಗೆ ಶೀಘ್ರ ಸುತ್ತೋಲೆ ಹೊರಡಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸೋಮವಾರದಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಕ್ಕೋಡಿ ಜೈನಮುನಿ ಹತ್ಯೆಗೆ ಸಂಬಂಧಿಸಿದಂತೆ ಗುಣಧರ ನಂದಿ ಮಹಾರಾಜರು ಜೈನ ಮುನಿಗಳಿಗೆ ರಕ್ಷಣೆಯನ್ನು ಕೋರಿ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಅವುಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ ಎಂದರು. ಜೈನಮುನಿಗಳ ವಿಹಾರ ಸಂದರ್ಭಗಳಲ್ಲಿ ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಅವಕಾಶ ನೀಡಬೇಕು ಎಂದು ವಿನಂತಿಸಿದ್ದರು. ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜೈನ‌ ನಿಗಮ ಮಂಡಳಿ ರಚನೆ ಸ್ಥಾಪಿಸಬೇಕೆನ್ನುವ ಬೇಡಿಕೆ ಸಹ ಮುಂದಿಟ್ಟಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಜೈನ‌ ಮಂದಿರಗಳ ಅತಿಕ್ರಮಣ ಮತ್ತು ದಬ್ಬಾಳಿಕೆ‌ ಕುರಿತು ಪೊಲೀಸ್‌ ಇಲಾಖೆಗೆ ತಿಳಿಸಿದಲ್ಲಿ,ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

Also Read  ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಲ್ಲ➤ ಮುಂದಿನ ದಿನದಲ್ಲಿ ಮತ್ತಷ್ಟು ಸಡಿಲಿಕೆ

error: Content is protected !!
Scroll to Top