(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು. 10. ಕುಕ್ಕೇ ಸುಬ್ರಹ್ಮಣ್ಯದಿಂದ ಸ್ವಲ್ ದೂರದ ನೂಚಿಲ ಎಂಬಲ್ಲಿರುವ ಪರ್ವತ ತಪ್ಪಲಿನ 8 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ತಾಲೂಕು ಆಡಳಿತ ಸೂಚಿಸಿದ್ದು, ಅದರಂತೆ ಅವರನ್ನು ಜು. 08ರಂದು ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಆದಿ ಸುಬ್ರಹ್ಮಣ್ಯ ದೇವಸ್ಥಾನ ಬಳಿಯ ನೂಚಿಲ ಗುಡ್ಡದ ಬುಡದಲ್ಲಿ 8 ಕುಟುಂಬಗಳು ಮನೆ ಕಟ್ಟಿಕೊಂಡು ವಾಸವಾಗಿದ್ದು, ಧಾರಾಕಾರ ಮಳೆಯ ನಡುವೆ ಗುಡ್ಡ ಕುಸಿದು ಬೀಳುವ ಅಪಾಯ ಹೆಚ್ಚಾಗಿರುವ ಹಿನ್ನೆಲೆ ಕುಟುಂಬಗಳನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಯ ಪ್ರವಾಸಿ ಮಂದಿರದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಗೀತಾ ಸತೀಶ್ ನೂಚಿಲ, ಪದ್ಮಯ್ಯ ನೂಚಿಲ, ದುಗ್ಗಣ್ಣ ನೂಚಿಲ, ದಿನೇಶ್ ನೂಚಿಲ, ಶೋಭಾ ಭಾಸ್ಕರ ನೂಚಿಲ, ದೇವಕಿ ಬಾಲಕೃಷ್ಣ, ಶೋಭಾ ಪ್ರಮೋದ್ ಕುಮಾರ್ ಹಾಗೂ ಬಿ.ಎನ್. ರಾಧಾಕೃಷ್ಣ ಎಂಬವರ ಮನೆಗಳನ್ನು ಸ್ಥಳಾಂತರ ಮಾಡಲಾಗಿದೆ. ಕಡಬ ತಹಶೀಲ್ದಾರ್ ಈ ಕುಟುಂಬಗಳಿಗೆ ಜು. 07 ನೋಟಿಸ್ ಜಾರಿ ಮಾಡಿದ್ದು ತಕ್ಷಣ ಮನೆಗಳಿಂದ ತೆರವಾಗಿ ಬೇರೆ ಕಡೆ ವಾಸ್ತವ್ಯ ಹೂಡಬೇಕು ಅಥವಾ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಬೇಕು. ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯಿದೆಯಡಿ ಮನೆ ಖಾಲಿ ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೇ ಮಳೆಗಾಲ ಮುಗಿಯುವವರೆಗೆ ಈ ಮನೆಗಳನ್ನು ಬಳಸದಂತೆಯೂ ಸೂಚನೆ ನೀಡಿದ್ದರು. ನೂಚಿಲ ಗುಡ್ಡ ಗಗನಚುಂಬಿ ಬೆಟ್ಟ ಇದಾಗಿದ್ದು, ಇದರ ಬುಡದಲ್ಲೇ ಮನೆಗಳಿವೆ. ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.