(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಜು. 10. ಚಿಕ್ಕೋಡಿಯ ಜೈನಮುನಿ ಹತ್ಯೆ ಖಂಡಿಸಿ ಹಾಗೂ ಜೈನ ಮುನಿಗಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಆಮರಣಾಂತ ಉಪವಾಸ ಮುಂದುವರಿಸುವ ಎಚ್ಚರಿಕೆ ನೀಡಿದ್ದ ವರೂರು ನವಗೃಹ ತೀರ್ಥ ಕ್ಷೇತ್ರದ 108 ಆಚಾರ್ಯ ಗುಣಧರ ನಂದಿ ಮಹಾರಾಜರು, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಭರವಸೆ ಮೇರೆಗೆ ಉಪವಾಸ ನಿರ್ಧಾರ ಕೈ ಬಿಟ್ಟಿದ್ದಾರೆ.
ವರೂರು ತೀರ್ಥಕ್ಷೇತ್ರಕ್ಕೆ ಸೋಮವಾರದಂದು ಭೇಟಿ ನೀಡಿದ್ದ ಗೃಹ ಸಚಿವ ಜಿ. ಪರಮೇಶ್ವರ ಅವರ ಜೊತೆ ಚರ್ಚಿಸಿ ಬಳಿಕ ಮಾಧ್ಯಮದ ಮುಂದೆ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ನಂದಿ ಮಹಾರಾಜರು ಕೈಗೊಂಡಿರುವ ಅಮರಣ ಉಪವಾಸ ನಿರತ ಸ್ಥಳಕ್ಕೆ ಭೇಟಿ ನಿಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜೈನ ಸಮುದಾಯದ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅಭಯ ನೀಡಿದರು. ರಾಜ್ಯ ಸರ್ಕಾರವು ಇತರೆ ಎಲ್ಲಾ ಧರ್ಮಗಳ ಆಚರಣೆ ಹಾಗೂ ಧರ್ಮಗುರುಗಳಿಗೆ ರಕ್ಷಣೆ ನೀಡಿದಂತೆ, ಜೈನ ಮುನಿಗಳ ಹಾಗೂ ಜೈನ ಬಸದಿಗಳ ರಕ್ಷಣೆಗೆ ಕಂಕಣಬದ್ದವಾಗಿದೆ ಎಂದು ಭರವಸೆ ನೀಡಿದ್ದರು.