ವಿಶೇಷ ಲೇಖನ ಜುಲೈ. 11: “ವಿಶ್ವ ಜನಸಂಖ್ಯಾ ದಿನ” – ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com  ಜು. 11. ಪ್ರತಿ ವರ್ಷ ಜುಲೈ 11ರಂದು ವಿಶ್ವದಾದ್ಯಂತ “ವಿಶ್ವ ಜನಸಂಖ್ಯಾ ದಿನ” ಎಂದು ಆಚರಿಸಲಾಗುತ್ತದೆ. ಏರುತ್ತಿರುವ ಜನಸಂಖ್ಯೆಯಿಂದಾಗುವ ಜಾಗತಿಕ ತೊಂದರೆ, ಸಮಸ್ಯೆ ಮತ್ತು ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು ಜುಲೈ 11, 1989ರಿಂದ ಜಾರಿಗೆ ತರಲಾಯಿತು.

ಕ್ಷಣ-ಕ್ಷಣಕ್ಕೂ ಏರುತ್ತಿರುವ ಜನಸಂಖ್ಯೆ ಜಾಗತಿಕವಾದ ಬಹುದೊಡ್ಡ ಸಮಸ್ಯೆಎಂದರೂ ತಪ್ಪಲ್ಲ. ಒಂದು ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ ಪ್ರತೀ ದಿನ 3,53,000 ಶಿಶುಗಳು ಜನಿಸುತ್ತವೆ. (ಪ್ರತೀ ನಿಮಿಷಕ್ಕೆ 255 ಮತ್ತು ಪ್ರತೀ ಕ್ಷಣಕ್ಕೆ 5 ಶಿಶುಗಳ ಜನನ) ಆದರೆ ಪ್ರತೀ ದಿನ ಜಾಗತಿಕವಾಗಿ 1,53,000 ವ್ಯಕ್ತಿಗಳು ಸಾವನ್ನಪ್ಪುತ್ತಾರೆ. (ಪ್ರತೀ ನಿಮಿಷಕ್ಕೆ 110 ಮತ್ತು ಪ್ರತೀಕ್ಷಣಕ್ಕೆ 2 ವ್ಯಕ್ತಿಗಳ ಮರಣ). ಕ್ಷಣ ಕ್ಷಣಕ್ಕೂಏರುತ್ತಿರುವ ಈ ಜನಸಂಖ್ಯೆಯನ್ನು ನಿಯಂತ್ರಿಸುವ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಇಲ್ಲವಾದಲ್ಲಿ ಪ್ರಾಥಮಿಕ ಮೂಲಭೂತ ಅವಶ್ಯಕತೆಗಳಾದ ಅನ್ನ, ನೀರು, ವಸತಿ, ವಿದ್ಯಾಭ್ಯಾಸ ಮತ್ತು ಆರೋಗ್ಯ ಅವಶ್ಯಕತೆಗಳನ್ನು ಪೂರೈಸುವುದು ಕಷ್ಟವಾಗಿ, ಭೂಮಂಡಲದಲ್ಲಿ ಜೀವಿಸುವುದೇ ಅಸಾಧ್ಯವಾಗಬಹದು. 1987 ಜುಲೈ 11ರಂದು ನಮ್ಮ ವಿಶ್ವದ ಜನಸಂಖ್ಯೆ ಅಧಿಕೃತವಾಗಿ 5 ಮಿಲಿಯನ್ (500ಕೋಟಿ) ತಲುಪಿತು. ಜನರಲ್ಲಿ ಜನಸಂಖ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಮೇರಿಕಾ ಆಡಳಿತ ಪರಿಷತ್ತು(UNDP) 1989ರಂದು “ವಿಶ್ವ ಜನಸಂಖ್ಯೆ” ದಿನದ ಆಚರಣೆಯನ್ನು ಜಾರಿಗೆ ತಂದಿತು. 2014 ಜನವರಿ 1ರ  ಅಂಕಿಅಂಶಗಳ ಪ್ರಕಾರ ವಿಶ್ವದ ಜನಸಂಖ್ಯೆ 7,137,661,030 (ಸುಮಾರು 713 ಕೋಟಿ). 2015 ಜನವರಿ 1ರ  ಜನಗಣತಿಯಂತೆ ಈ ಜನಸಂಖ್ಯೆ 7,145,680,000 ಎಂದು ತಿಳಿದು ಬಂದಿದೆ. (ಸುಮಾರು ಏಳುನೂರು ಹದಿನಾಲ್ಕು ಕೋಟಿ) ಈ ಜನಸಂಖ್ಯೆಯಲ್ಲಿ ಸುಮಾರು 60 ಶೇಕಡಾ ಮಂದಿ ಏಷ್ಯಾ ಖಂಡದಲ್ಲಿ ವಾಸಿಸುತ್ತಾರೆ. ವಿಶ್ವ ಜನಸಂಖ್ಯೆಯ 19 ಶೇಕಡಾ ಮಂದಿ ಚೀನಾದಲ್ಲಿ (145 ಕೋಟಿ) 18 ಶೇಕಡಾ ಮಂದಿ ಭಾರತದಲ್ಲಿ, (140 ಕೋಟಿ) 12 ಶೇಕಡಾ ಮಂದಿ ಆಪ್ರಿಕಾದೇಶದಲ್ಲಿ, 11 ಶೇಕಡಾ ಮಂದಿ ಯುರೋಪ್‍ದೇಶದಲ್ಲಿ, 8 ಶೇಕಡಾ ಮಂದಿ ಉತ್ತರ ಅಮೇರಿಕಾದಲ್ಲಿ ಮತ್ತು 5.5 ಶೇಕಡಾ ಮಂದಿ ದಕ್ಷಿಣ ಅಮೇರಿಕಾದಲ್ಲಿ ವಾಸಿಸುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ನಮ್ಮಕರ್ನಾಟಕದಲ್ಲಿ ಸುಮಾರು 7ಕೋಟಿ ಜನಸಂಖ್ಯೆ ಇದ್ದು, ಭಾರತದ ಜನಸಂಖ್ಯೆ 140 ಕೋಟಿಗಿಂತಲೂ ಜಾಸ್ತಿಯಾಗಿರುವುದಂತೂ ಸತ್ಯ. ಜನಸಂಖ್ಯೆ ಜಾಸ್ತಿಯಾದಂತೆ ಮೂಲಭೂತ ಅವಶ್ಯಕತೆಗಳು ಮತ್ತು ಸೌಲಭ್ಯಗಳು ದೊರಕದಿರುವುದೇ ಬಹುದೊಡ್ಡ ವಿಪರ್ಯಾಸ. ಇದರಿಂದಾಗಿ  ನೂರಾರು ಸಮಸ್ಯೆಗಳಿಗೆ ನಾಂದಿ ಹಾಡಿದೆ. ಒಂದು ದೇಶದ ಪ್ರಗತಿ ಮತ್ತು ಪರಿಪೂರ್ಣ ಬೆಳವಣಿಗೆಗೆ ಮನುಷ್ಯನ ಸಾಮರ್ಥ್ಯ (Man Power) ಎಷ್ಟು ಅಗತ್ಯವೋ ಅಷ್ಟೇ ರೀತಿಯಲ್ಲಿ ಏರುತ್ತಿರುವ ಜನಸಂಖ್ಯೆ ಕೂಡಾ ಬೆಳವಣಿಗೆಗೆ  ಕಡಿವಾಣ ಹಾಕುತ್ತದೆ ಎನ್ನುವುದು ವಿಪರ್ಯಾಸವಾದರೂ ನಂಬಲೇಬೇಕಾದ ಸತ್ಯ. 1987 ಜುಲೈ 11ರಂದು 500ಕೋಟಿ ತಲುಪಿದ್ದ ವಿಶ್ವದ ಜನಸಂಖ್ಯೆ 2015ರಲ್ಲಿ ಅಂದರೆ ಕೇವಲ 28 ವರ್ಷಗಳಲ್ಲಿ ಏಳುನೂರ ಹದಿನೈದು ಕೋಟಿಗೆ ತಲುಪಿರುವುದು ಬಹಳ ಸೋಜಿಗದ ಸಂಗತಿ ಮತ್ತು ಕಡಿವಾಣ ಹಾಕದಿದ್ದಲ್ಲಿ 2050ರಲ್ಲಿ ಒಂದು ಸಾವಿರ ಕೋಟಿ ತಲುಪಿದರೂ ಆಶ್ಚರ್ಯವಲ್ಲ. 2023 ರ ಅಂಕಿ ಅಂಶಗಳ ಪ್ರಕಾರ ಜಗತ್ತಿನ ಜನಸಂಖ್ಯೆ 800 ಕೋಟಿ ದಾಟಿದೆ.

Also Read  ಈ 8 ರಾಶಿಯವರಿಗೆ ಉದ್ಯೋಗ ಪ್ರಾಪ್ತಿ, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಹೆಂಡತಿ ಕಲಹ ಮನೆಯ ಸಮಸ್ಯೆಗಳು ನಿವಾರಣೆಯಾಗುತ್ತದೆ

ಜನಸಂಖ್ಯಾ ದಿನಾಚರಣೆಯ ಧ್ಯೇಯಗಳು

  1. ಯುವಜನರನ್ನು ರಕ್ಷಿಸಲು ಮತ್ತು ಸಬಲೀಕರಣಗೊಳಿಸಲು ಮತ್ತು ಗಂಡು ಹೆಣ್ಣಿನ ಅನುಪಾತವನ್ನು ಕಾಯ್ದುಕೊಳ್ಳುವ ಸದುದ್ದೇಶ ಹೊಂದಿದೆ.
  2. ಬಾಲ್ಯವಿವಾಹವನ್ನು ತಪ್ಪಿಸಿ ತಮ್ಮಜೀವನದಗುರಿ ಮತ್ತು ಉದ್ದೇಶಗಳ ಬಗ್ಗೆ ಅರಿವು ಮೂಡಿಸುವುದಾಗಿದೆ.
  3. ಯುವಜನರಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಸೆಕ್ಸ್ ವಿಚಾರಧಾರೆಯನ್ನು ಮನಗತ ಮಾಡುವುದಾಗಿದೆ.
  4. ಲಿಂಗ ತಾರತಮ್ಯದ ಧೋರಣೆಯನ್ನು ಕಡಿಮೆ ಮಾಡುವುದು
  5. ಸಣ್ಣ ವಯಸ್ಸಿನಲ್ಲಿ ಗರ್ಭಧರಿಸದಂತೆ ಜಾಗೃತಿ ಮೂಡಿಸಲು ಮತ್ತು ಬಾಲ್ಯ ವಿವಾಹ ಮತ್ತು ಸಣ್ಣ ವಯಸ್ಸಿನಲ್ಲಿ ತಾಯಿಯಾಗುವುದರಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವುದು.
  6. ಅನಾರೋಗ್ಯಕರವಾದ ಸೆಕ್ಸ್‍ ನಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು.
  7. ಗಂಡು ಹೆಣ್ಣು ಮಕ್ಕಳಿಗೆ ತಾರತಮ್ಯ ಮಾಡದೆ ಇಬ್ಬರಿಗೂ ಪ್ರಾಥಮಿಕ ಸೌಲಭ್ಯಗಳು ಮತ್ತು ವಿದ್ಯಾಭ್ಯಾಸ ಒದಗಿಸುವ ಬಗ್ಗೆ ಮನವರಿಕೆ ಮಾಡಿಸುವುದು.
  8.  ಹೆಣ್ಣು ಮಗುವಿನ ಕಾನೂನು ಬಾಹಿರ ಭ್ರೂಣ ಹತ್ಯೆಯನ್ನು ನಿಲ್ಲಿಸಲು ಮತ್ತು ಗಂಡು ಹೆಣ್ಣಿನ ಸರಿಯಾದ ಅನುಪಾತ ಉಂಟಾಗಲು ಪೂರಕವಾದ ವಾತಾವರಣ ನಿರ್ಮಿಸುವ ಉದ್ದೇಶ.

ಕೊನೆಮಾತು

ಭಾರತದ ಜನಸಂಖ್ಯೆ 2015ರ ಜುಲೈ ತಿಂಗಳ ಆರಂಭದಲ್ಲಿ 128 ಕೋಟಿ ತಲುಪಿತ್ತು. 1950ರಲ್ಲಿ 40 ಕೋಟಿಯಷ್ಟಿದ್ದ ಜನಸಂಖ್ಯೆ 2000 ಇಸವಿಯ ಹೊತ್ತಿಗೆ 100 ಕೋಟಿಯನ್ನು ದಾಟಿತ್ತು. ಇದೇ ವೇಗದಲ್ಲಿ ಮುನ್ನಡೆದರೆ 2050ರ ಹೊತ್ತಿಗೆ ಭಾರತದ ಜನಸಂಖ್ಯೆ 170 ಕೋಟಿ ತಲುಪಿದರೂ ಆಶ್ಚರ್ಯವೇನಲ್ಲ. ಜನಸಂಖ್ಯೆಯ ಆಧಾರದಲ್ಲಿ ಭಾರತಕ್ಕೆ ಚೀನಾದ ನಂತರದ 2ನೇ ಸ್ಥಾನ ದೊರಕಿದೆ. 2025ರ ಹೊತ್ತಿಗೆ ಭಾರತ ಚೀನಾದೇಶವನ್ನು ಹಿಂದಿಕ್ಕಿ  ಜನಸಂಖ್ಯೆಯ ಆಧಾರದಲ್ಲಿ ಒಂದನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಆದರೆ ಸಂತಸದ ವಿಚಾರವೆಂದರೆ  ಈ ಜನಸಂಖ್ಯೆಯ ಶೇಕಡಾ 50 ಮಂದಿ 25 ವರ್ಷಗಳಿಗಿಂತ ಕೆಳಗಿನವರು ಮತ್ತು 65 ಶೇಕಡಾ ಮಂದಿ 35 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ. 2020ರಲ್ಲಿ ಸರಾಸರಿ ಭಾರತೀಯ ಪ್ರಜೆಯ ವಯಸ್ಸು 29 ಆಗಿರುವುದು ಸಮಾಧಾನಕರ ಅಂಶ. (ಸರಾಸರಿ ಚೀನಾ ಪ್ರಜೆಯ ವಯಸ್ಸು 37 ಮತ್ತು ಜಪಾನ್‍ ದೇಶದ ಸರಾಸರಿ ವಯಸ್ಸು 48) ಭಾರತದ ಈ ಯುವಶಕ್ತಿಯನ್ನು ಸದುಪಯೋಗ ಪಡಿಸಿಕೊಂಡಲ್ಲಿ ಮಾತ್ರ ಭಾರತದೇಶ ವಿಶ್ವದ ಹಿರಿಯಣ್ಣನಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ. 800 ಕೋಟಿ ಜಾಗತಿಕ ಜನಸಂಖ್ಯೆಯಲ್ಲಿ ಸುಮಾರು 180ರಿಂದ 200 ಕೋಟಿ ಮಂದಿ ಯುವಜನಾಂಗಕ್ಕೆ ಸೇರಿರುತ್ತಾರೆ. ಈ ಯುವಕ ಯುವತಿಯರು ತಮ್ಮ ಜವಾಬ್ದಾರಿ ಅರಿತು ಜನಸಂಖ್ಯೆ ಸ್ಪೋಟದಿಂದಾಗುವ ದುಷ್ಪರಿಣಾಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದಲ್ಲಿ ಬಹುತೇಕ ಜಾಗತಿಕ ತೊಂದರೆಗಳಾದ ಬಡತನ, ಅನಕ್ಷರತೆ, ಅಜ್ಞಾನ, ಅನಾರೋಗ್ಯ, ಅತ್ಯಾಚಾರ, ಅಸುರಕ್ಷಿತ ಜೀವನಶೈಲಿ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಅತೀ ತುರ್ತು ಜನಸಂಖ್ಯಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯುವಕರು ಮತ್ತು ಯುವತಿಯರು ಕುಟುಂಬ ನಿಯಂತ್ರಣ ಯೋಜನೆ, ಸುರಕ್ಷಿತವಾದ ಸೆಕ್ಸ್, ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಲಿಂಗ ತಾರತಮ್ಯದ ವಿರೋಧಿಸುವಿಕೆ, ತಾಯಿ ಮತ್ತು ಮಗುವಿನ ಆರೋಗ್ಯ, ಬಡತನ, ಮಾನವನ ಹಕ್ಕುಗಳು ಮತ್ತು ಆರೋಗ್ಯದ ಹಕ್ಕು ಇತ್ಯಾದಿಗಳ ಬಗ್ಗೆ ಹೆಚ್ಚು ನಿಗಾ ವಹಿಸಿದಲ್ಲಿ ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಜನಸಂಖ್ಯಾ ಸ್ಪೋಟಗೊಂಡು ತುತ್ತು ಕೂಳಿಗೂ ತತ್ವಾರವಾಗಿ, ಮೂರು ಹೊತ್ತಿನ ಊಟಕ್ಕೂ ಜಗಳವಾಡಬೇಕಾದ ದುಸ್ಥಿತಿ ಬರಲೂಬಹುದು. ಪ್ರತಿಯೊಬ್ಬ ಪ್ರಜೆಯು ತನ್ನ ಜವಾಬ್ದಾರಿಯನ್ನು ಅರಿತು ಸೂಕ್ತವಾಗಿ ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಅದರಲ್ಲಿಯೇ ನಮ್ಮೆಲ್ಲರ ಒಳಿತು ಮತ್ತು ಜಗತ್ತಿನ  ಹಿತ ಅಡಗಿದೆ. ಈ ನಮ್ಮ ಭೂಮಿ ಬರೀ ಮನುಷ್ಯನಿಗೆ ಆಶ್ರಯ ನೀಡುತ್ತಿಲ್ಲ, ಲಕ್ಷಾಂತರ ಇತರ ಜೀವ ಪ್ರಭೇದಗಳಿಗೂ ಆಶ್ರಯ ನೀಡುತ್ತದೆ. ಅತಿಯಾದ ಜನಸಂಖ್ಯೆಯ ಹೆಚ್ಚಳದಿಂದ ಇತರ ಜೀವ ಸಂಕುಲಗಳ ನಾಶಕ್ಕೆ ನಾಂದಿ ಹಾಡುತ್ತಿದೆ. ಪ್ರತಿ ನಾಲ್ಕು ಘಂಟೆಗಳಿಗೆ ಒಂದು ಜೀವ ಪ್ರಭೇದ ಭೂಮಂಡಲದಿಂದ ಕಣ್ಮರೆಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಮಾನವನೇ ಆಗಿರುತ್ತಾನೆ. ಇದರ ಜೊತೆಗೆ ಅಗಾಧ ಜನಸಂಖ್ಯೆಯ ಕಾರಣದಿಂದ ಸಾಂಕ್ರಾಮಿಕ ರೋಗಗಳೂ ಶೀಘ್ರವಾಗಿ ಹರಡುತ್ತಿದೆ. ಈಗ ವಿಶ್ವದಾದ್ಯಂತ ತನ್ನ ರುದ್ರ ನರ್ತನವನ್ನು ಮಾಡಿ ಮನುಕುಲವನ್ನು ಹೈರಾಣಾಗಿಸಿರುವ ಕೋವಿಡ್-19 ವೈರಾಣು ಜ್ವರ ಇದಕ್ಕೆ ಬಹಳ ಉತ್ತಮ ಉದಾಹರಣೆ. ಒತ್ತಡದಜೀವನ ಶೈಲಿಯಿಂದಾಗಿ ಪುರುಷರಲ್ಲಿ ಬಂಜೆತನ ಜಾಸ್ತಿಯಾಗುತ್ತಿದೆ. ಪ್ರತಿ ದಿನ ಅಪೌಷ್ಠಿಕತೆಯಿಂದಾಗಿ 30 ಲಕ್ಷ ಮಕ್ಕಳು ಮತ್ತು 15 ಸಾವಿರ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿದಿರುತ್ತದೆ. ಒಟ್ಟಿನಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿದ್ದರೆ ಮಾತ್ರ ಸಂಪನ್ಮೂಲಗಳ ಸರಿಯಾದ ಹಂಚಿಕೆಯಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಅದೇ ರೀತಿ ಆರೋಗ್ಯ, ಶಿಕ್ಷಣ, ವಸತಿ ಮತ್ತು ಇನ್ನಿತರ ಮೂಲಭೂತ ಸೌಲಭ್ಯ ಯಾವುದೇ ಪೈಪೋಟಿ ಇಲ್ಲದೆಎಲ್ಲರಿಗೂ ಸಿಗಬೇಕಾದಲ್ಲಿ ಜನಸಂಖ್ಯೆಯ ನಿಯಂತ್ರಣ ಆಗಲೇಬೇಕು. ಈ ನಿಟ್ಟಿನಲ್ಲಿ ನಾವೆಲ್ಲಾ ಚಿಂತಿಸಿ…ಮಂಥಿಸಿ ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಲ್ಲಿ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣ ಸಾಧ್ಯವಿದೆ.

Also Read  ವಶೀಕರಣ ವಿದ್ಯೆ ಬಗೆಗಿನ ಮಾಹಿತಿ.

ಡಾ|| ಮುರಲೀ ಮೋಹನ ಚೂಂತಾರು

MDS,DNB,MOSRCSEd (UK) MBA, FPFA

ಸುರಕ್ಷಾ ದಂತ ಚಿಕಿತ್ಸಾಲಯ, ಹೊಸಂಗಡಿ– 671 323, ಮೊ : 09845135787

error: Content is protected !!
Scroll to Top