(ನ್ಯೂಸ್ ಕಡಬ) newskadaba.com ಮಂಗಳೂರು, ಜು. 10. ಮಂಗಳೂರಿನ ಜನತೆಯನ್ನು ಬೆಚ್ಚಿಬೀಳಿಸಿದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಕರ್ನಾಟಕದಲ್ಲಿ ಸಿಕ್ಕಿಬಿದ್ದಿರುವ ಶಂಕಿತ ಉಗ್ರರಿಗೆ ಭಯೋತ್ಪಾದನಾ ಕೃತ್ಯಗಳಿಗೆ ‘ಕ್ರಿಪ್ಟೋ ಕರೆನ್ಸಿ’ ಮೂಲಕವೇ ವಿದೇಶಗಳಿಂದ ಲಕ್ಷಾಂತರ ರೂ. ಬಂದಿದೆ ಎಂಬ ಶಾಕಿಂಗ್ ಮಾಹಿತಿ ಎನ್ಐಎ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಮಂಗಳೂರಿನ ನಾಗುರಿಯಲ್ಲಿ 2022ರ ನ.19ರಂದು ನಡೆದ ಕುಕ್ಕರ್ ಬಾಂಬ್ ಸ್ಫೋಟ ಹಾಗೂ ಶಿವಮೊಗ್ಗದಲ್ಲಿ ನಡೆದ ಟ್ರಯಲ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಶಂಕಿತ ಉಗ್ರರಿಗೆ ಐಸಿಸ್ ಹ್ಯಾಂಡ್ಲರ್ ಗಳು ಡಾರ್ಕ್ ವೆಬ್ ಮೂಲಕ ಕ್ರಿಪ್ಟೋ ಕರೆನ್ಸಿ ಕಳುಹಿಸಿದ್ದಾರೆ ಎಂಬುದು ಸಾಬೀತಾಗಿದ್ದು, ಈ ಬಗ್ಗೆ ಎನ್ಐಎ ಇತ್ತೀಚೆಗೆ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್ಶೀಟ್ನಲ್ಲಿ ಕೂಡ ಉಲ್ಲೇಖಿಸಿದೆ. ಅಲ್ಲದೇ, ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದ ಉಗ್ರ ಮಹಮ್ಮದ್ ಶಾರೀಕ್ ಡಾರ್ಕ್ ನೆಟ್ನಲ್ಲಿ ಖಾತೆ ಹೊಂದಿದ್ದಾನೆ. ವಿದೇಶದಿಂದ ಡಾಲರ್ ಹಾಗೂ ಬಿಟ್ ಕಾಯಿನ್ ಈತನ ಖಾತೆಗೆ ಬರುತ್ತಿತ್ತು. ಇದನ್ನು ಆತ ಭಾರತೀಯ ಕರೆನ್ಸಿಗೆ ಬದಲಾಯಿಸಿ ಸ್ನೇಹಿತರು ಹಾಗೂ ಪರಿಚಯಸ್ಥರು ಸೇರಿ ನೂರಾರು ಜನರ ಖಾತೆಗಳಿಗೆ ವರ್ಗಾವಣೆ ಮಾಡಿ, ಮತ್ತೆ ಅವರ ಖಾತೆಗಳಿಂದ ಇನ್ನೊಬ್ಬರ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದ ಎಂಬ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ.