(ನ್ಯೂಸ್ ಕಡಬ) newskadaba.com ವಿಟ್ಲ, ಜು. 08. ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಮೇಗಿನಪೇಟೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ವಿಟ್ಲ ಮೇಗಿನಪೇಟೆ ನಿವಾಸಿ ಗುರುವಪ್ಪರವರ ಪುತ್ರ, ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ (30) ಎಂದು ಗುರುತಿಸಲಾಗಿದೆ.
ಪ್ರಶಾಂತ್ ರವರು ಶುಕ್ರವಾರದಂದು ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಥಳೀಯರು ಬಂದು ನೋಡಿದಾಗ ಮನೆಯೊಳಗಡೆ ಪ್ರಶಾಂತ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಜರು ನಡೆಸಲಾಗಿದೆ. ಮೃತರು ವಿವಾಹಿತರಾಗಿದ್ದು, ಕೆಲ ಸಮಯಗಳ ಹಿಂದೆ ಪತ್ನಿ ಅವರನ್ನು ತೊರೆದಿದ್ದರೆನ್ನಲಾಗಿದೆ. ಪ್ರಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ, ಆತ್ಮಹತ್ಯೆಗೆ ಕೌಟುಂಬಿಕ ಮನಸ್ತಾಪವೇ ಕಾರಣ ಎಂದು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
