(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಜು.04. ಕಾರು ಹಾಗೂ ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಓರ್ವ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಸಕ್ರೆಬೈಲು ಎಂಬಲ್ಲಿ ಮಂಗಳವಾರದಂದು ನಡೆದಿದೆ.

ಮೃತ ವ್ಯಕ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಪ್ಪೆಪದವು ಕಲ್ಲಾಡಿ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿದೆ. ಅಶ್ರಫ್ ತನ್ನ ಸಂಬಂಧಿಗಳ ಜೊತೆಗೆ ಶಿವಮೊಗ್ಗಕ್ಕೆ ತೆರಳಿ ಊರಿಗೆ ಹಿಂತಿರುಗುತ್ತಿದ್ದ ವೇಳೆ ಇವರು ಸಂಚರಿಸುತ್ತಿದ್ದ ಕಾರು ಹಾಗೂ ತೀರ್ಥಹಳ್ಳಿಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ನವದುರ್ಗಾ ಸಂಸ್ಥೆಯ ಖಾಸಗಿ ಬಸ್ ನಡುವೆ ತೀರ್ಥಹಳ್ಳಿಯ ಸಕ್ರೆಬೈಲು ಸಮೀಪ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಅಶ್ರಫ್ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಬಸ್ಸಿನ ಮುಂಭಾಗಕ್ಕೆ ಹಾಬಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


