(ನ್ಯೂಸ್ ಕಡಬ) newskadaba.com ಮಡಿಕೇರಿ, ಜು. 04. ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮುಂಬೈ ಮೂಲದ ಮಹಿಳೆ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಸುಂಟಿಕೊಪ್ಪದ ಗದ್ದೆಹಳ್ಳದ ಬಳಿ ನಡೆದಿದೆ.

ಮೃತ ಮಹಿಳೆಯನ್ನು ಅಂಧೇರಿ ವೆಸ್ಟ್ ಮುಂಬೈ ನಿವಾಸಿ ಸೀಮಾ (50) ಎಂದು ಗುರುತಿಸಲಾಗಿದೆ.

ಇವರ ಪತಿ ಸುಧೀರ ಚಂದಾಲಿಯಾ (53) ಹಾಗೂ ಕಾರು ಚಾಲಕ ಉಡುಪಿ ಜಿಲ್ಲೆಯ ಕುಂಜಿಬೆಟ್ಟು ಗ್ರಾಮದ ನಿವಾಸಿ ಮೊಹಮ್ಮದ್ ರಫೀಕ್ (28) ಎಂಬವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಡಿಕೇರಿ ಕಡೆಯಿಂದ ಸುಂಟಿಕೊಪ್ಪದ ರೆಸಾರ್ಟ್ ಗೆ ಆಗಮಿಸುತ್ತಿದ್ದ ಕಾರಿಗೆ ಕುಶಾಲನಗರ ಕಡೆಯಿಂದ ಮಡಿಕೇರಿಯತ್ತ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿದ್ದು, ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸುಂಠಿಕೊಪ್ಪ ಪೊಲೀಸರು ಚಾಲಕನ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.
